ಬೆಂಗಳೂರು: ಕೊರೊನಾ ಎರಡನೇ ಅಲೆ ಆತಂಕ ಮೂಡಿಸಿದ್ದು ಸೋಂಕು ತಡೆಯುವ ಉದ್ದೇಶದಿಂದ ಕಠಿಣ ನಿಯಮ ಜಾರಿಗೊಳಿಸಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.
ನಿಯಮ ಉಲ್ಲಂಘನೆಗೆ 100 ರೂಪಾಯಿಯಿಂದ 10 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುವುದು. ನಗರಪ್ರದೇಶದಲ್ಲಿ ಮಾಸ್ಕ್ ಧರಿಸದವರಿಗೆ 250 ರೂಪಾಯಿ, ಉಳಿದೆಡೆ 100 ರೂ. ದಂಡ ಹಾಕಲಾಗುವುದು.
ಹೋಟೆಲ್, ಶಾಪಿಂಗ್ ಮಾಲ್, ಸಾರ್ವಜನಿಕ ಸಮಾರಂಭಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ. ನಿಯಮ ಉಲ್ಲಂಘಿಸಿದಲ್ಲಿ ಆಯೋಜಕರು ಅಥವಾ ಮಾಲೀಕರಿಗೆ 10 ಸಾವಿರ ರೂಪಾಯಿ ಹಾಕಲಾಗುವುದು. ಪಾರ್ಟಿ ಹಾಲ್, ವಾಣಿಜ್ಯ ಮಳಿಗೆ, ಬ್ರಾಂಡೆಡ್ ಶಾಪ್, ಅಂಗಡಿಗಳು, ಸ್ಟಾರ್ ಹೋಟೆಲ್, ಮದುವೆ ಸಮಾರಂಭ ಮೊದಲಾದ ಕಡೆ ನಿಯಮ ಪಾಲಿಸದಿದ್ದರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
ಮದುವೆಗಳಿಗೆ ಹೊರಾಂಗಣದಲ್ಲಿ 500 ಜನರಿಗೆ, ಒಳಾಂಗಣದಲ್ಲಿ 200 ಜನರಿಗೆ ಅವಕಾಶವಿದೆ. ಅಂತ್ಯಕ್ರಿಯೆಯಲ್ಲಿ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಧಾರ್ಮಿಕ ಸಮಾರಂಭ, ರಾಜಕೀಯ ಸಮಾರಂಭಗಳಿಗೂ 500 ಜನರು ಇರಬೇಕು. ನಿಯಮ ಮೀರಿದರೆ ಆಯೋಜಕರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
ಸಭೆ, ಸಮಾರಂಭ ಆಯೋಜಿಸುವವರು ಮತ್ತು ಹೋಟೆಲ್ ಗಳಲ್ಲಿ ನಿಯಮ ಉಲ್ಲಂಘನೆ ಮಾಡಿದರೆ 10 ಸಾವಿರ ರೂ. ದಂಡ ಹಾಕಲಾಗುವುದು. ಕಲ್ಯಾಣ ಮಂದಿರ, ಸಮುದಾಯ ಭವನ, ಹೋಟೆಲ್, ಡಿಪಾರ್ಟ್ ಮೆಂಟಲ್ ಸ್ಟೋರ್, ಶಾಪ್ ಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಆಯಾ ಸ್ಥಳದ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.