ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ತಜ್ಞರೊಂದಿಗೆ ಸಭೆ ನಡೆಸಲಾಗುತ್ತದೆ. ನಾಳೆ ಸಂಜೆ ತಜ್ಞರೊಂದಿಗೆ ಸಭೆ ನಡೆಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳಿನ ಸಭೆಯಲ್ಲಿ ತಜ್ಞರ ಸಲಹೆ ಪಡೆದು, ಗುರುವಾರ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮತ್ತು ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೊರೋನಾ ನಿಯಂತ್ರಣಕ್ಕೆ ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು. ಹಿಂದಿನ ಎರಡು ಅಲೆಗಳ ಅನುಭವ ಹಿನ್ನೆಲೆಯಲ್ಲಿ. ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಕೊರೋನಾ ನಿಯಂತ್ರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲು ತಜ್ಞರಿಗೆ ತಿಳಿಸಲಾಗಿದೆ.
ರಾಜ್ಯವನ್ನು ಸುರಕ್ಷಾ ಚಕ್ರದ ಒಳಗೆ ತರುವ ನಿಟ್ಟಿನಲ್ಲಿ ಮಕ್ಕಳಿಗೆ ಲಸಿಕೆ ಅಭಿಯಾನ ಕೈಗೊಳ್ಳಲಾಗಿದೆ. ಶಿಕ್ಷಕರು, ಶಾಲೆಗಳ ಆಡಳಿತ ಮಂಡಳಿ, ಆರೋಗ್ಯ ಕಾರ್ಯಕರ್ತರು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ತಿಳಿಸಲಾಗಿದೆ. ಈ ಹಿಂದೆ ಎರಡು ಸಲ ಕೊರೋನಾ ಸಂಕಷ್ಟ ತಂದಿದೆ. ಈಗ ಸೋಂಕು ನಿಯಂತ್ರಣಕ್ಕೆ ಸ್ವಯಂ ನಿಯಂತ್ರಣ ಕೈಗೊಳ್ಳಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದನ್ನು ಮಾಡಬೇಕೆಂದು ಜನತೆಗೆ ಮನವಿ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.