ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ತಹಸಿಲ್ದಾರ್ ಗೆ ಕರ್ನಾಟಕ ಮಾಹಿತಿ ಆಯೋಗ 25000 ರೂ. ದಂಡ ವಿಧಿಸಿದೆ. ಯಲಹಂಕ ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದಿರುವ ಜೊತೆಗೆ ಮಾಹಿತಿ ಆಯೋಗ ನೀಡಿದ ಶೋಕಾಸ್ ನೋಟಿಸ್ ಗೂ ಉತ್ತರ ನೀಡದ ಕಾರಣ 25,000ರೂ. ದಂಡ ವಿಧಿಸಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ.
ಬೆಂಗಳೂರಿನ ತಾವರೆಕೆರೆ ನಿವಾಸಿಅಶ್ವತ್ಥ್ ರೆಡ್ಡಿ ಅವರು ಸಲ್ಲಿಸಿದ್ದ ಎರಡನೇ ಮೇಲ್ಮನವಿ ಪರಿಶೀಲಿಸಿದ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ಎನ್.ಸಿ. ಶ್ರೀನಿವಾಸ ಅವರಿದ್ದ ಪೀಠದಿಂದ ಈ ಆದೇಶ ನೀಡಲಾಗಿದೆ.
ಕರ್ನಾಟಕ ಮಾಹಿತಿ ಆಯೋಗ ಮೇಲ್ಮನವಿ ಮಾನ್ಯ ಮಾಡಿದ್ದು, ಕೂಡಲೇ ಕಾಯ್ದೆಯಂತೆ ಅರ್ಜಿದಾರರಿಗೆ ಮಾಹಿತಿ ಒದಗಿಸಬೇಕು ಎಂದು ಆದೇಶ ನೀಡಿದೆ. ಮುಂದಿನ ವಿಚಾರಣೆ ದಿನಾಂಕದೊಳಗೆ ಯಲಹಂಕ ತಹಶೀಲ್ದಾರ್ ಆಗಿರುವ ಮಾಹಿತಿ ಅಧಿಕಾರಿ ಅನಿಲ್ ಕುಮಾರ್ 25,000 ರೂ. ದಂಡ ಪಾವತಿಸಬೇಕು. ಅವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದು, ಡಿಸೆಂಬರ್ 27 ರೊಳಗೆ ಅನುಪಾಲನಾ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.