ಕೋಲಾರ: ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕು ತಹಶೀಲ್ದಾರ್ ಖಾಸಗಿ ಮಾಹಿತಿ ಕೇಳಿದ ಆರ್.ಟಿ.ಐ. ಕಾರ್ಯಕರ್ತನನ್ನು ಬಂಧಿಸಲಾಗಿದೆ.
ತಹಶೀಲ್ದಾರ್ ಶೋಭಿತಾ ಅವರ ವೈಯಕ್ತಿಕ ವಿಚಾರ ತಿಳಿದುಕೊಳ್ಳಲು ಆರ್ಟಿಐ ಕಾರ್ಯಕರ್ತ ಮಂಡಿಕಲ್ ಗ್ರಾಮದ ನಾಗರಾಜ್ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ ಶೋಭಿತಾ ಅವರಿಗೆ ಇದುವರೆಗೆ ಎಷ್ಟು ಮದುವೆಯಾಗಿದೆ, ಯಾರೊಂದಿಗೆ ವಿಚ್ಛೇದನ ಆಗಿದೆ, ಅವರು ಸದ್ಯ ಯಾರ ಜೊತೆಗೆ ಸಂಸಾರ ಮಾಡುತ್ತಿದ್ದಾರೆ. ಎಲ್ಲಿ ಮದುವೆಯಾಗಿದೆ, ಲಗ್ನಪತ್ರಿಕೆ, ಕಲ್ಯಾಣ ಮಂಟಪದ ಮಾಹಿತಿ, ಅವರ ಗಂಡಂದಿರು ಬಿಡಲು ಕಾರಣವೇನು, ಯಾವ ಇಲಾಖೆಯಲ್ಲಿ ಅವರು ಕೆಲಸ ಮಾಡಿದ್ದಾರೆ ಸೇರಿದಂತೆ ಹಲವು ಖಾಸಗಿ ಮಾಹಿತಿಯನ್ನು ನೀಡುವಂತೆ ಆರ್ಟಿಐ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶೋಭಿತಾ ಮುಳಬಾಗಲು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ನಾಗರಾಜ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.