ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ(ಆರ್.ಟಿ.ಇ.)ಯಡಿ 2024 -25 ನೇ ಸಾಲಿನ ದಾಖಲಾತಿ, ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಫೆಬ್ರವರಿ 7ರಂದು ಆರ್.ಟಿ.ಇ. ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟ, ಫೆಬ್ರವರಿ 23 ರಂದು ಶಾಲೆಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸುವುದು, ಫೆಬ್ರವರಿ 28ರಂದು ನೆರೆಹೊರೆ ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಮಾರ್ಚ್ 4ರಂದು ಶೇಕಡ 25ರಷ್ಟು ಸೀಟುಗಳು ಲಭ್ಯವಿರುವ ಶಾಲೆಗಳ ಪಟ್ಟಿಯನ್ನು ಜಿಲ್ಲೆಯ ಅಧಿಕೃತ ವೆಬ್ಸೈಟ್ ಮತ್ತು ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸುವುದು. ಮಾರ್ಚ್ 20, 21ರಂದು ಪ್ರಾಯೋಗಿಕವಾಗಿ ಅರ್ಜಿ ಸಲ್ಲಿಕೆ ಆರಂಭ, ಮಾರ್ಚ್ 22 ರಿಂದ ಏಪ್ರಿಲ್ 22ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ, ಏ. 30 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಈ ಕುರಿತಾಗಿ ಸೂಚನೆ ನೀಡಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ 2024 -25 ನೇ ಸಾಲಿನ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಾಲೆಗಳ ಮ್ಯಾಪಿಂಗ್ ಮಾಡಲು ಡಿಡಿಪಿಐ ಮತ್ತು ಬಿಇಒಗಳಿಗೆ ತಿಳಿಸಲಾಗಿದೆ.
ರಾಜ್ಯದ ಸರ್ಕಾರಿ, ಬಿಬಿಎಂಪಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮ್ಯಾಪಿಂಗ್ ಮಾಡುವುದು. ಅಲ್ಪಸಂಖ್ಯಾತ ಶಾಲೆಗಳೆಂದು ಘೋಷಣಾ ಪತ್ರ ಪಡೆದಿರುವ, ಈಗಾಗಲೇ ಮುಚ್ಚಿದ ಮತ್ತು ಕೋರ್ಟ್ ತಡೆಯಾಜ್ಞೆ ಪಡೆದ ಶಾಲೆಗಳನ್ನು ಪಟ್ಟಿಯಿಂದ ಕೈಬಿಡಬೇಕು. ಎಲ್.ಕೆ.ಜಿ., ಯುಕೆಜಿ ತರಗತಿಗಳನ್ನು ಮಾತ್ರ ನಡೆಸುವ ಶಾಲೆಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಬಾರದು ಎಂದು ಹೇಳಲಾಗಿದೆ.
2023ರ ಡಿಸೆಂಬರ್ 31 ರಲ್ಲಿದ್ದ ದಾಖಲಾತಿ ಸಂಖ್ಯೆ ಆಧರಿಸಿ ಶೇಕಡ 25ರಷ್ಟು ಸೀಟು ಹಂಚಿಕೆ ಪರಿಗಣಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ. ನೆರೆಹೊರೆ ಶಾಲೆಗಳಿಗೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಆಕ್ಷೇಪಣೆ ಸ್ವೀಕರಿಸಿ ಪರಿಶೀಲಿಸಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲು ಬಿಇಒಗಳಿಗೆ ತಿಳಿಸಲಾಗಿದೆ.