
ವಿಜಯಪುರ: ರಾಜ್ಯದಲ್ಲೆಡೆ ಆರ್.ಟಿ.ಸಿ. ಅಭಿಯಾನ ನಡೆಸಲಾಗುವುದು. ಒಂದೇ ದಿನ ರೈತರ ಮನೆ ಬಾಗಿಲಿಗೆ ಉಚಿತವಾಗಿ ಆರ್.ಟಿ.ಸಿ., ಪಹಣಿ, ಸ್ಕೆಚ್ ಕಾಪಿ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಜಮೀನುಗಳಿಗೆ ನ್ಯಾಯವಾದ ಬೆಲೆ ಒದಗಿಸಲು 79 /ಎ/ಬಿ ತೆಗೆದುಹಾಕಲಾಗಿದೆ. ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಲು ನಿಯಮವನ್ನು ಸರಳಿಕರಣ ಮಾಡಲಾಗಿದೆ. ಒಂದೇ ದಿನ ರಾಜ್ಯದ ಸುಮಾರು 40 ಲಕ್ಷ ರೈತರ ಮನೆ ಬಾಗಿಲಿಗೆ ಉಚಿತವಾಗಿ ಆರ್.ಟಿ.ಸಿ. ನಕ್ಷೆ ಮತ್ತು ಪಹಣಿ ತಲುಪಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮ ವಾಸ್ತವ್ಯದ ಮೂಲಕ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದ್ದಾರೆ.