ಬೆಂಗಳೂರು: ಜಮೀನು ಪಹಣಿಗೆ ಆಧಾರ್ ಜೋಡಣೆಗೆ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಟಿ.ಸಿ.ಗೆ ಆಧಾರ್ ಲಿಂಕ್ ಮಾಡಲು ಚಿಂತನೆ ನಡೆದಿದ್ದು, ಈ ಸಂಬಂಧ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ತಹಶೀಲ್ದಾರ್ ಕಚೇರಿಗಳಲ್ಲಿ ಇ-ಆಫೀಸ್ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ತಹಶೀಲ್ದಾರ್ ಕಚೇರಿಗಳಲ್ಲಿ ದಾಖಲೆ ಕೊಠಡಿಗಳಲ್ಲಿರುವ ಅನೇಕ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ಸಮರ್ಪಕವಾಗಿ ಕಾಪಾಡಲು ಡಿಜಿಟಲೀಕರಣ ಮಾಡಲು ತೀರ್ಮಾನಿಸಲಾಗಿದೆ. ದಾಖಲೆಗಳ ಸ್ಕ್ಯಾನಿಂಗ್ ಮಾಡಲು ತೀರ್ಮಾನಿಸಿದ್ದು, ಕೆಲವು ದಾಖಲೆಗಳು ಕಳೆದು ಹೋಗುತ್ತಿವೆ. ಕೆಲವು ಖಾಸಗಿ ವ್ಯಕ್ತಿಗಳು ರೆಕಾರ್ಡ್ ರೂಂಗೆ ಹೋಗಿ ದಾಖಲೆ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಜನ ದಾಖಲೆ ಪ್ರತಿ, ಮಾಹಿತಿ ಪಡೆಯಲು ಹರಸಾಹಸ ಪಡುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರೆಕಾರ್ಡ್ ರೂಂನಲ್ಲಿರುವ ಹಳೆಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಾಯೋಗಿಕವಾಗಿ ಕೆಲವು ತಾಲೂಕು ಕಚೇರಿಗಳಲ್ಲಿ ದಾಖಲೆಗಳ ಸ್ಕ್ಯಾನಿಂಗ್ ಆರಂಭವಾಗಿದೆ. ಜನವರಿ ನಂತರ ಎಲ್ಲಾ ದಾಖಲೆ ಸ್ಕ್ಯಾನಿಂಗ್ ಮಾಡಲಾಗುವುದು. ರಾಜ್ಯದಲ್ಲಿ ಸುಮಾರು 2.40 ಕೋಟಿ ಪಹಣಿ ಇದ್ದು, 3.80 ಕೋಟಿ ಖಾತೆದಾರರು ಇದ್ದಾರೆ ಎಂದು ತಿಳಿಸಿದ್ದಾರೆ.