ಬೆಂಗಳೂರು: ರಾಜ್ಯದಲ್ಲಿ ಪಹಣಿ -ಆಧಾರ್ ಜೋಡಣೆ ಕಾರ್ಯ ಶರವೇಗದಲ್ಲಿ ನಡೆಯುತ್ತಿದ್ದು, 4 ಕೋಟಿ ಪಹಣಿಗಳ ಪೈಕಿ 1.75 ಕೋಟಿ ಪಹಣಿಗಳಿಗೆ ಆಧಾರ್ ಜೋಡಣೆಯಾಗಿದೆ.
ಕಂದಾಯ ಇಲಾಖೆಯಿಂದ ಉಳಿದ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯ ಭರದಿಂದ ಸಾಗಿದೆ. ಕಂದಾಯ ಇಲಾಖೆ ವತಿಯಿಂದ ಆರ್.ಟಿ.ಸಿ.ಗೆ ಭಾವಚಿತ್ರದೊಂದಿಗೆ ಆಧಾರ್ ಜೋಡಣೆ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದಾಗಿ ಭೂಗಳ್ಳತನ, ಜಮೀನು ಕಬಳಿಕೆ ತಡೆಗಟ್ಟಲು ಅನುಕೂಲವಾಗುತ್ತದೆ. ಭೂಮಾಲೀಕರು ಇದರ ಸದ್ಬಳಕೆ ಮಾಡಿಕೊಳ್ಳಲು ತಿಳಿಸಲಾಗಿದೆ.
ಇದಕ್ಕಾಗಿಯೇ ‘ನನ್ನ ಆಧಾರ್ ಕಾರ್ಡ್ ನೊಂದಿಗೆ ನನ್ನ ಆಸ್ತಿ ಸುಭದ್ರ’ ಯೋಜನೆಯನ್ನು ಆರಂಭಿಸಲಾಗಿದೆ. ಈ ಮೂಲಕ ರಾಜ್ಯದ ರೈತರ ಅದರಲ್ಲಿಯೂ ಸಣ್ಣ ಮತ್ತು ಅತಿ ಸಣ್ಣ ರೈತರು ಎಷ್ಟು ಮಂದಿ ಇದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂಬ ಮಾಹಿತಿ ಗೊತ್ತಾಗಲಿದೆ. ಒಬ್ಬನೇ ರೈತ ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಜಮೀನು ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿ ಒಂದೇ ಕಡೆ ಸಿಗುತ್ತದೆ.
ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಆಧಾರ್ ಜೋಡಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟಿಪಿ ಆಧಾರಿತ ಇ-ಕೆವೈಸಿ, ಕೃಷಿ ಭೂಮಿ ಮಾಲೀಕರ ಮಾಹಿತಿ, ಫೋಟೋ ಸೆರೆ ಹಿಡಿಯಲಾಗುತ್ತದೆ. ಸದ್ಯ ಪಹಣಿಯಲ್ಲಿ ಆಧಾರ್ ಸಂಖ್ಯೆ ಇರಲಿದ್ದು, ಈಗ ಪಡೆಯುವ ಫೋಟೋ ಮಾಲೀಕರ ಆಸ್ತಿ ವಿವರದ ಜೊತೆ ಡೇಟಾಬೇಸ್ ನಲ್ಲಿ ಸಂಗ್ರಹವಾಗುತ್ತದೆ. ಆಧಾರ್ ಸಂಖ್ಯೆ ಮತ್ತು ಫೋಟೋ ಜೋಡಣೆ ಮಾಡುವುದರಿಂದ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವುದನ್ನು ತಡೆಯಬಹುದಾಗಿದೆ. ರೈತರ ಆಸ್ತಿ ಸುರಕ್ಷಿತವಾಗಿರುತ್ತದೆ. ರೈತರಿಗೆ ಪರಿಹಾರ ತಲುಪಿಸಲು, ಮ್ಯುಟೇಶನ್, ಸಬ್ಸಿಡಿ ನೀಡಲು ಅನುಕೂಲವಾಗುತ್ತದೆ.