ತನ್ನ ಮುಖವಾಣಿ ’ಪಾಂಚಜನ್ಯ’ದ ಲೇಖನವೊಂದರಲ್ಲಿ ಸಾಫ್ಟ್‌ವೇರ್ ದಿಗ್ಗಜ ಇನ್ಫೋಸಿಸ್ ವಿರುದ್ಧ ದೇಶದ ಆರ್ಥಿಕತೆಗೆ ಹಾನಿ ಮಾಡುತ್ತಿರುವ ಗಂಭೀರ ಆಪಾದನೆ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಇದೀಗ ಈ ವಿವಾದದಿಂದ ದೂರ ಉಳಿಯುವ ಯತ್ನ ಮಾಡಿದೆ. ಆ ಟೀಕಾತ್ಮಕ ಲೇಖನವು ಬರಹಗಾರರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಸ್ಪಷ್ಟನೆ ಕೊಟ್ಟಿರುವ ಆರ್‌ಎಸ್‌ಎಸ್ ನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್ ಅಂಬೇಡ್ಕರ್, ಪಾಂಚಜನ್ಯದಲ್ಲಿ ಬರೆದ ಲೇಖನವು ಲೇಖಕರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.
“ಭಾರತೀಯ ಕಂಪನಿಯಾಗಿ ಇನ್ಫೋಸಿಸ್ ದೇಶದ ಪ್ರಗತಿಗೆ ದೊಡ್ಡ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಇನ್ಫೋಸಿಸ್ ನಡೆಸುತ್ತಿರುವ ಪೋರ್ಟಲ್‌ನಲ್ಲಿ ಕೆಲವೊಂದು ಸಮಸ್ಯೆಗಳು ಇರಬಹುದು, ಆದರೆ ಪಾಂಚಜನ್ಯದಲ್ಲಿ ಪ್ರಕಟಿಸಲಾದ ಲೇಖನವು ಈ ನಿಟ್ಟಿನಲ್ಲಿ ಲೇಖಕರ ವೈಯಕ್ತಿಕ ಅಭಿಪ್ರಾಯವನ್ನು ಮಾತ್ರವೇ ಪ್ರತಿಬಿಂಬಿಸುತ್ತದೆ” ಎಂದು ತಿಳಿಸಿದ್ದಾರೆ.
MBBS ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಅಂಬೇಡ್ಕರ್ ಜತೆಗೆ ಹಿಂದುತ್ವ ನಾಯಕರ ಬಗ್ಗೆಯೂ ಪಾಠ
“ಪಾಂಚಜನ್ಯ ಆರ್‌ಎಸ್‌ಎಸ್‌ನ ಮುಖವಾಣಿಯಲ್ಲ ಹಾಗೂ ಈ ಲೇಖನದಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯವನ್ನು ಆರ್‌ಎಸ್‌ಎಸ್‌ನೊಂದಿಗೆ ಬೆಸೆಯಬಾರದು” ಎಂದು ಅವರು ತಿಳಿಸಿದ್ದಾರೆ.
ನಾಲ್ಕು ಪುಟಗಳ ತನ್ನ ಕವರ್ ಸ್ಟೋರಿ ’ಸಾಖ್ ಔರ್ ಅಘಾತ್’ನಲ್ಲಿ ಇನ್ಫೋಸಿಸ್ ದೇಶದ್ರೋಹಿ ಸಂಘಟನೆಗಳನ್ನು ಬೆಂಬಲಿಸುತ್ತಿದೆ ಎಂದು ಪಾಂಚಜನ್ಯ ಆಪಾದನೆ ಮಾಡಿತ್ತು. ಈ ಸ್ಟೋರಿಯೊಂದಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಚಿತ್ರವೂ ಇತ್ತು.
ಇನ್ಫೋಸಿಸ್ ಅಭಿವೃದ್ಧಿ ಪಡಿಸಿದ ಪೋರ್ಟಲ್‌ಗಳಲ್ಲಿ ಉಂಟಾಗುತ್ತಿರುವ ನಿರಂತರ ಸಮಸ್ಯೆಗಳಿಂದಾಗಿ ದೇಶದ ತೆರಿಗೆದಾರರು ಹಾಗೂ ಹೂಡಿಕೆದಾರರಿಗೆ ಭಾರೀ ಅನಾನುಕೂಲಗಳಾಗುತ್ತಿವೆ ಎಂದು ಆಪಾದಿಸಿದ ಈ ಲೇಖನವು, ಇಂಥ ಘಟನೆಗಳಿಂದಾಗಿ ದೇಶದ ಆರ್ಥಿಕತೆ ಮೇಲೆ ತೆರಿಗೆದಾರರು ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ ಎಂದಿತ್ತು.
ಇನ್ಫೋಸಿಸ್ ನಕ್ಸಲರು, ಎಡಪಂಥೀಯರು ಹಾಗೂ ತುಕಡೇ ತುಕಡೇ ಗ್ಯಾಂಗ್‌ಗಳನ್ನು ಬೆಂಬಲಿಸುತ್ತಿದೆ ಎಂದು ಲೇಖನದಲ್ಲಿ ಗಂಭೀರ ಆಪಾದನೆ ಮಾಡಲಾಗಿತ್ತು.