ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್.ಎಸ್.ಎಸ್.) ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಇದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ. ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ ಸಚಿವಾಲಯದಿಂದ ಜುಲೈ 9ರಂದು ಈ ಸಂಬಂಧ ಆದೇಶ ಹೊರಡಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ ಖಾತೆಯಲ್ಲಿ ಆದೇಶದ ಪ್ರತಿ ಹಂಚಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ, ಕೇಂದ್ರದ ಕ್ರಮವನ್ನು ಆರ್.ಎಸ್.ಎಸ್. ಸ್ವಾಗತಿಸಿದೆ.
1966ರ ನವೆಂಬರ್ 30ರಂದು ಸರ್ಕಾರಿ ನೌಕರರು ಆರ್.ಎಸ್.ಎಸ್. ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಷೇಧ ಹೇರಿತ್ತು. ಇದೀಗ ನಿಷೇಧವನ್ನು ಹಿಂಪಡೆಯಲಾಗಿದೆ.
ಬಿಜೆಪಿ ಇದನ್ನು ಸ್ವಾಗತಿಸಿದೆ. ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಸರ್ಕಾರಿ ಸಿಬ್ಬಂದಿಗೆ ಆರ್.ಎಸ್.ಎಸ್. ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಅನುಮತಿ ನೀಡಿರುವುದು ಸ್ವಾಗತಾರ್ಹ. ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇನ್ನು ಕೆಲವೇ ತಿಂಗಳಲ್ಲಿ ಆರ್.ಎಸ್.ಎಸ್. 100ನೇ ವರ್ಷಕ್ಕೆ ಕಾಲಿಡುತ್ತಿದೆ. ಇಷ್ಟು ಅವಧಿಯಲ್ಲಿ ಸಂಘಟನೆ ನಿರಂತರವಾಗಿ ಬೆಳೆಯುತ್ತಲೇ ಸಾಗಿದೆ ಎಂದು ಹೇಳಿದ್ದಾರೆ.