ಮುಂಬೈನ ಪಂಚತಾರಾ ಹೋಟೆಲ್‍ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.ಎಸ್.ಎಸ್.) ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಮುಸ್ಲಿಂ ಸಮುದಾಯದ ಪ್ರಮುಖ ಮುಖಂಡರುಗಳು ಸೋಮವಾರ ಮಹತ್ವದ ಸಭೆ ನಡೆಸುತ್ತಿದ್ದಾರೆ. ನಾಗ್ಪುರದಲ್ಲಿ ಆರ್.ಎಸ್.ಎಸ್. ಆಯೋಜಿಸಿರುವ ಮೂರು ದಿನಗಳ ಸಮನ್ವಯ ಸಭೆ ಮುಗಿಯುತ್ತಿರುವ ಬೆನ್ನಿಗೇ ಮುಸ್ಲಿಂ ಮುಖಂಡರೊಂದಿಗೆ ಭಾಗವತ್ ಅವರ ಈ ಸಭೆಯು ಗಮನ ಸೆಳೆದಿದೆ.
ಉತ್ತರಪ್ರದೇಶ ವಿಧಾನಸಭೆ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಆರ್.ಎಸ್.ಎಸ್. ಮತ್ತು ಬಿಜೆಪಿ, ಧಾರ್ಮಿಕ ಅಲ್ಪಸಂಖ್ಯಾತರ ಮನವೊಲಿಕೆಯ ಯಾವುದೇ ಯತ್ನವನ್ನು ಕೂಡ ಕೈಚೆಲ್ಲುತ್ತಿಲ್ಲ ಎಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ.
ಕಳೆದ ಜುಲೈನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಭಾಗವತ್ ಅವರು, “ದೇಶದ ಹಿಂದೂ ಹಾಗೂ ಮುಸ್ಲಿಮರ ಡಿಎನ್‍ಎಗಳು ಒಂದೇ ಆಗಿವೆ. ಭಾರತದಲ್ಲಿ ಹಿಂದೂಗಳು ಅಲ್ಲ, ಮುಸ್ಲಿಮರು ಅಲ್ಲ. ಕೇವಲ ಭಾರತೀಯರ ಸಾರ್ವಭೌಮತ್ವ ಇರಬೇಕು” ಎಂಬ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು.
ಸೆಪ್ಟೆಂಬರ್‌ನಲ್ಲಿ ತನ್ನ ಎಲ್ಲ ವಿಭಾಗಗಳ ಮುಖ್ಯಸ್ಥರೊಂದಿಗೆ ಬೃಹತ್ ಸಭೆಯೊಂದನ್ನು ಸಂಘ ಹಮ್ಮಿಕೊಂಡಿದೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸಭೆಯ ವಿಚಾರವನ್ನು ಆದಷ್ಟು ಸಾಮಾನ್ಯವಾಗಿ ಇರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.