ನಾಗಪುರ: ದಸರಾ ಉತ್ಸವದ ಭಾಷಣದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಖಂಡಿಸಿದ್ದಾರೆ.
ಶನಿವಾರ ಸಂಘಟನೆಯ ದಸರಾ ಉತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಹೆಚ್ಚು ಉಲ್ಲೇಖಿಸಲಾಗಿದೆ. ಹಿಂದೂ ಸಮುದಾಯ ಎದುರಿಸುತ್ತಿರುವ ದೌರ್ಜನ್ಯವನ್ನು ಪ್ರಸ್ತಾಪಿಸಲಾಗಿದೆ.
ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಏನಾಯಿತು? ಇದಕ್ಕೆ ಕೆಲವು ತಕ್ಷಣದ ಕಾರಣಗಳಿರಬಹುದು, ಆದರೆ, ಹಿಂದೂಗಳ ಮೇಲೆ ದೌರ್ಜನ್ಯ ಪುನರಾವರ್ತನೆಯಾಯಿತು. ಮೊದಲ ಬಾರಿಗೆ ಹಿಂದೂಗಳು ಒಗ್ಗೂಡಿದರು. ಮತ್ತು ಅವರ ರಕ್ಷಣೆಗಾಗಿ ಬೀದಿಗಿಳಿದರು. ಹಿಂದೂಗಳು ಮಾತ್ರವಲ್ಲದೆ ಎಲ್ಲಾ ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾಗ ಭಾರತವು ಅವರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆರ್ಎಸ್ಎಸ್ ಮುಖ್ಯಸ್ಥರು, ಭಾರತ ಎದುರಿಸುತ್ತಿರುವ ಅಕ್ರಮ ಒಳನುಸುಳುವಿಕೆಯ ಸಮಸ್ಯೆಯನ್ನು ಸಹ ಎತ್ತಿ ತೋರಿಸಿದ್ದಾರೆ. ಈ ದಬ್ಬಾಳಿಕೆಯ ಮೂಲಭೂತವಾದ(ದೌರ್ಜನ್ಯ ಮಾಡುವವರು) ದೇಶದಲ್ಲಿ ಇರುವವರೆಗೂ, ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಬೆದರಿಕೆ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.
ಅದಕ್ಕಾಗಿಯೇ ಆ ದೇಶದಿಂದ ಭಾರತಕ್ಕೆ ಅಕ್ರಮ ನುಸುಳುವಿಕೆ ಮತ್ತು ಅದರಿಂದ ಉಂಟಾದ ಜನಸಂಖ್ಯೆಯ ಅಸಮತೋಲನವು ದೇಶದ ಸಾಮಾನ್ಯ ಜನರಲ್ಲಿ ಗಂಭೀರ ಆತಂಕದ ವಿಷಯವಾಗಿದೆ. ಈ ಅಕ್ರಮ ನುಸುಳುವಿಕೆಯಿಂದಾಗಿ ದೇಶದಲ್ಲಿ ಪರಸ್ಪರ ಸಾಮರಸ್ಯ ಮತ್ತು ಭದ್ರತೆಗೆ ಧಕ್ಕೆ ಇದೆ ಎಂದು ಹೇಳಿದ್ದಾರೆ.