ಹೈದರಾಬಾದ್: ಸಂಘ ಪರಿವಾರವು ಕೆಲವು ಗುಂಪುಗಳಿಗೆ ವಿಸ್ತರಿಸಿರುವ ಮೀಸಲಾತಿಯನ್ನು ಎಂದಿಗೂ ವಿರೋಧಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ನಡುವೆಯೇ ಮೀಸಲಾತಿ ಕುರಿತು ಅವರು ಪುನರುಚ್ಚರಿಸಿದರು.
ಹೈದರಾಬಾದ್‌ನ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, ಮೀಸಲಾತಿಗಳನ್ನು ಎಲ್ಲಿಯವರೆಗೆ ಅಗತ್ಯವಿದೆಯೋ ಅಲ್ಲಿಯವರೆಗೆ ವಿಸ್ತರಿಸಬೇಕು ಎಂದು ಸಂಘವು ಭಾವಿಸುತ್ತದೆ ಎಂದು ಹೇಳಿದರು.
ಆರ್‌ಎಸ್‌ಎಸ್ ಮೀಸಲಾತಿ ವಿರುದ್ಧ ಎಂಬ ವಿಡಿಯೋ ಹರಿದಾಡುತ್ತಿದ್ದು, ಈ ಬಗ್ಗೆ ಹೊರಗಡೆ ಮಾತನಾಡುವಂತಿಲ್ಲ. ಈಗ ಇದು ಸಂಪೂರ್ಣ ಸುಳ್ಳು. ಸಂವಿಧಾನದ ಪ್ರಕಾರವೇ ಎಲ್ಲ ಮೀಸಲಾತಿಗಳನ್ನು ಸಂಘವು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದೆ. ಮೊದಲಿನಿಂದಲೂ ಸುಳ್ಳು ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ ಎಂದರು.
ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು. ಅಗೋಚರವಾಗಿದ್ದರೂ ಸಮಾಜದಲ್ಲಿ ತಾರತಮ್ಯವಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಕಳೆದ ವರ್ಷ ನಾಗ್ಪುರದಲ್ಲಿ ಹೇಳಿದ್ದರು.