ಬೆಂಗಳೂರು: ಆರ್.ಎಸ್.ಎಸ್. ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಅವರಿಗಿರುವ ಅಜ್ಞಾನ, ಭೀತಿ ಹಾಗೂ ಅವರ ವೈಯಕ್ತಿಕ ಹತಾಶೆಯನ್ನು ತೋರುತ್ತೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ದೇಶಸೇವೆ, ಜನಸೇವೆ, ರಾಷ್ಟ್ರೀಯತೆಯ ಸಿದ್ಧಾಂತಗಳ ಮೂರ್ತ ರೂಪವೇ ಸಂಘ. ದೇಶದ ಮೂಲೆ ಮೂಲೆಗಳಲ್ಲಿ ಈ ವಿಚಾರಧಾರೆಗಳನ್ನು ಒಪ್ಪಿದ ಕೋಟ್ಯಂತರ ಜನರಿದ್ದಾರೆ. ದೇಶ ಮೊದಲು ಎಂಬ ಬದ್ಧತೆಯನ್ನು ಬಿಜೆಪಿ ಪ್ರತಿಪಾದಿಸುತ್ತದೆ ಎಂದು ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ದೇಶದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಅಭೂತಪೂರ್ವ ಜನಾದೇಶ ಪಡೆದು ಆಯ್ಕೆಯಾದ ಪಕ್ಷವನ್ನು, ಪ್ರಧಾನಿ, ಮುಖ್ಯಮಂತ್ರಿಗಳನ್ನು ಟೀಕಿಸುವ ಭರದಲ್ಲಿ ಜನಾದೇಶವನ್ನು ಪ್ರಶ್ನಿಸುತ್ತಿರುವುದು ಸರಿಯಲ್ಲ. ಇದಕ್ಕೆ ಜನರೇ ಉತ್ತರ ಕೊಡುತ್ತಾರೆ.
ಆರ್ ಎಸ್ ಎಸ್ ಬಗ್ಗೆ ಮಾತನಾಡುವ ಮೊದಲು ಕುಮಾರಸ್ವಾಮಿಯವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಂದ ಮಾಹಿತಿ ಪಡೆದುಕೊಳ್ಳಬಹುದಿತ್ತು. ಆರ್ ಎಸ್ ಎಸ್ ನ್ನು ಹೊಗಳಿದ ಹಿರಿಯ ಗೌಡರ ನುಡಿಗಳು, ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರ ನಡೆ ಇತಿಹಾದಲ್ಲಿ ದಾಖಲಾಗಿದೆ. ಪೂರ್ವಾಗ್ರಹವಿಲ್ಲದೆ ವಾಸ್ತವ ಪರಿಶೀಲಿಸಿದರೆ ಸಂಘದ ಬಗ್ಗೆ ನಿಮ್ಮ ತಪ್ಪು ಕಲ್ಪನೆ ದೂರಾಗಬಹುದು ಎಂದು ಹೇಳಿದ್ದಾರೆ.