ಆರ್.ಎಸ್.ಎಸ್ ದೇಶಪ್ರೇಮ ಹೊಂದಿರುವ ಸಂಘಟನೆಯಾಗಿದ್ದು, ಅಜ್ಞಾನದಿಂದ ಕೆಲವರು ಸಂಘಟನೆಯ ವಿರುದ್ಧ ಮಾತನಾಡುತ್ತಾರೆ. ನಾನು ಕೂಡ ಈ ಹಿಂದೆ ಆರ್.ಎಸ್.ಎಸ್. ವಿರೋಧ ಮಾತನಾಡುತ್ತಿದ್ದೆ. ಆದರೆ ಕಳೆದ ಐದು ತಿಂಗಳಿನಿಂದ ಸಂಘಟನೆಯ ಕಾರ್ಯ ನಿರ್ವಹಣೆಯನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಆರ್.ಎಸ್.ಎಸ್. ಇಡೀ ದೇಶಕ್ಕೆ ಸಂಸ್ಕಾರ ಕೊಡುತ್ತಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿಯ ಪರ್ಕಳದಲ್ಲಿ ನಡೆದ ಆರ್.ಎಸ್.ಎಸ್. ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಅವರು ಪಥ ಸಂಚಲನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಶಕ್ತಿಯನ್ನು ಸಹಿಸದೆ ಟೀಕೆ ಮಾಡುವವರು ಇದ್ದಾರೆ. ಆದರೆ ಈ ರೀತಿ ಹೊಟ್ಟೆಕಿಚ್ಚಿನಿಂದ ಮಾತನಾಡುವವರ ಸಮಸ್ಯೆಗೆ ಯಾವುದೇ ಮದ್ದಿಲ್ಲ ಎಂದು ತಿಳಿಸಿದ್ದಾರೆ.
ಆರ್.ಎಸ್.ಎಸ್. ಸಂಘಟನೆಯಲ್ಲಿ ದೇಶಭಕ್ತಿ, ದೇಶಪ್ರೇಮ, ದೇಶ ನಿಷ್ಠೆ ಎಂಬುದು ಮೊದಲಿನಿಂದಲೂ ಇದೆ. ಅಲ್ಲದೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರು ಮಾಡುವ ಸೇವಾಕಾರ್ಯ ಸ್ಮರಣೀಯವಾದದ್ದು ಎಂದ ಅವರು, ಈ ಸಂಘಟನೆಯನ್ನು ಹೊರಗಿನಿಂದ ಟೀಕೆ ಮಾಡುವುದು ಸುಲಭ. ಈ ರೀತಿ ಅಜ್ಞಾನದಿಂದ ಮಾತನಾಡುವವರು ಆರ್ ಎಸ್ ಎಸ್ ಒಳಗೆ ಬಂದು ಜ್ಞಾನ ಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.