ಅಹಮದಾಬಾದ್: ಗುಜರಾತ್‌ನ ಅಮುಲ್ ಹಾಗೂ ಕರ್ನಾಟಕದ ನಂದಿನಿ ಪರಸ್ಪರ ಸಹಕಾರದಿಂದ ತಾಂತ್ರಿಕವಾಗಿ ಬೆಳೆಯಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿದ್ದ ಬಳಿಕ ಇದೀಗ ಗುಜರಾತ್ ಅಮುಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ಸೋಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆರ್.ಎಸ್. ಸೋಧಿ ರಾಜೀನಾಮೆಯನ್ನು ಅಮುಲ್ (ಗುಜರಾತ್ ಕೋ ಆಪರೇಟೀವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್) ಅಂಗೀಕರಿಸಿದೆ. ಹೀಗಾಗಿ ಅಮುಲ್ ಸಿಒಒ ಆಗಿರುವ ಜಯೇನ್ ಮೆಹ್ತಾಗೆ ಇದೀಗ ಹೆಚ್ಚುವರಿಯಾಗಿ ವ್ಯವಸ್ಥಾಪಕ ನಿರ್ದೇಶಕ ಜವಾಬ್ದಾರಿ ವಹಿಸಲಾಗಿದೆ.
ಆರ್.ಎಸ್. ಸೋಧಿ ಅಮುಲ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿ 2010ರಿಂದ ಸೇವೆ ಸಲ್ಲಿಸುತ್ತಿದ್ದರು. ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, 2017ಕ್ಕೆ ನನ್ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಅವಧಿ ಅಂತ್ಯವಾಗಿತ್ತು. ಆದರೆ 2017ರಿಂದ ಹೆಚ್ಚುವರಿ ಅವಧಿ ಎಂಡಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ನಾನು ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆಯನ್ನು ಅಮುಲ್ ಅಂಗೀಕರಿಸಿದೆ ಎಂದಿದ್ದಾರೆ.
ಅಮುಲ್ 2021ರಲ್ಲಿ 61,000 ಕೋಟಿ ರೂಪಾಯಿ ವ್ಯವಹಾರ ನಡೆಸಿತ್ತು. ಇತ್ತ ಕರ್ನಾಟಕದಲ್ಲಿ (Karnataka) ನಂದಿನಿ (Nandini) ಸಂಸ್ಥೆ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಎರಡೂ ಸಂಸ್ಥೆಗಳ ವಿಲೀನ ಕುರಿತು ಅಮಿತ್ ಶಾ ಮಾತನಾಡಿದ್ದಾರೆ ಎಂದು ವಿವಾದ ಸೃಷ್ಟಿಯಾಗಿತ್ತು. ಒಬ್ಬರಿಗೊಬ್ಬರು ಸಹಕಾರದ ಮೂಲಕ ನಂದಿನಿ ಮತ್ತು ಅಮುಲ್ ತಾಂತ್ರಿಕವಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕು. ಪೂರಕವಾಗಿ ಕೆಲಸ ಮಾಡಬೇಕು ಎಂದು ಶಾ ಹೇಳಿದ್ದಾರೆ. ಇದು ವಿಲೀನಗೊಳಿಸುವುದು ಎಂದಲ್ಲ. ನಂದಿನಿ ಅಸ್ತಿತ್ವ ನೂರಾರು ವರ್ಷ ಶಾಶ್ವತವಾಗಿ ಇರಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.