ಹೈದರಾಬಾದ್: ಬ್ಯಾಂಕ್ ವಚಂನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ವೆ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ (KSBL) ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದು, 700 ಕೋಟಿ ರೂಪಾಯಿ ಷೇರು ಜಪ್ತಿ ಮಾಡಿದ್ದಾರೆ.
ಹೈದರಾಬಾದ್ ನಲ್ಲಿರುವ ಕಾರ್ವೆ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಸಿ. ಪಾರ್ಥಸಾರಥಿ ಕುಟುಂಬದ ಒಡೆತನದ 700 ಕೋಟಿ ಷೇರುಗಳನ್ನು ಜಪ್ತಿ ಮಾಡಿದ್ದಾರೆ.
ಸಿ.ಪಾರ್ಥಸಾರಥಿ, ಕುಟುಂಬದವರು ಇಂಡಸ್ ಇಂಡ್ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್ ಗಳಿಂದ ಸಾಲ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ಅಲ್ಲದೇ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ತೆಲಂಗಾಣ ಪೊಲೀಸರಿಂದ ಬಂಧನಕ್ಕೀಡಾಗಿರುವ ಸಿ.ಪಾರ್ಥಸಾರಥಿಯವರನ್ನು ಹೈದರಾಬಾದ್ ನ ಚಂಚಲಗುಡಾ ಜೈಲಿನಲ್ಲಿರಿಸಲಾಗಿದೆ.