ಡೆಹ್ರಾಡೂನ್ ಮೂಲದ 50 ವರ್ಷದ ಮಹಿಳೆ ಗೋಲ್ಡನ್ ರಿಟ್ರೈವರ್ ತಳಿಯ ಶ್ವಾನವನ್ನು ಕೊಳ್ಳಲು ಹೋಗಿ ಕ್ಯಾಮರೂನ್ ಮೂಲದ ಬೆಂಗಳೂರಿನ ನಿವಾಸಿ ಸೈಬರ್ ಕಳ್ಳನ ಬಳಿ ಬರೋಬ್ಬರಿ 66 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಸಂತ್ರಸ್ತೆ ನೀಡಿದ ದೂರನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ ಉತ್ತರಾಖಂಡ್ ಪೊಲೀಸರು ಡಿಂಗ್ ಬೋಗ್ಬಾ ಕ್ಲಾವ್ಸ್ ಅಲಿಯಾಸ್ ಬಾಬಿ ಇಬ್ರಾಹಿಂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಬಿಯನ್ನು ಡೆಹ್ರಾಡೂನ್ಗೆ ಕರೆತರಲಾಗಿದ್ದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಉತ್ತಾರಖಂಡ್ನ ಪೊಲೀಸ್ ಅಧಿಕಾರಿ ಅಂಕುಶ್ ಮಿಶ್ರಾ, ದೂರುದಾರ ಮಹಿಳೆಯು ಆನ್ಲೈನ್ನಲ್ಲಿ ಗೋಲ್ಡನ್ ರಿಟ್ರೈವರ್ ತಳಿಯ ಶ್ವಾನ ಖರೀದಿಗೆಂದು ಹುಡುಕಾಟ ನಡೆಸಿದ್ದರು. ಪುತ್ರಿಗೆ ಜನ್ಮದಿನದಂದು ಉಡುಗೊರೆ ರೂಪದಲ್ಲಿ 15 ಸಾವಿರ ರೂ. ಮೌಲ್ಯದ ಶ್ವಾನವನ್ನು ಖರೀದಿಸಬೇಕೆಂದುಕೊಂಡಿದ್ದರು. ಆದರೆ ಈಕೆಯನ್ನು ಬಾಬಿ ಇಬ್ರಾಹಿಂ ಮೋಸದ ಜಾಲಕ್ಕೆ ನೂಕಿದ್ದ. ಆಕೆಯನ್ನು ಪುಸಲಾಯಿಸಿ 66 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾನೆ.
ಆದರೆ ಬಾಬಿ ಇಬ್ರಾಹಿಂನ ಮೋಸದ ಜಾಲದ ಬಗ್ಗೆ ಅನುಮಾನಗೊಂಡ ಮಹಿಳೆಯು ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ ಹಣ ವಾಪಸ್ ಬೇಕು ಅಂದರೆ ಇನ್ನಷ್ಟು ಹಣ ನೀಡಬೇಕು ಎಂದು ಬಾಬಿ ಡಿಮ್ಯಾಂಡ್ ಮಾಡಿದ್ದ. ಹೀಗಾಗಿ ಮಹಿಳೆಯು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಆತನಿಂದ ಡಜನ್ ಗಟ್ಟಲೇ ಮೊಬೈಲ್ ಫೋನ್, ಲ್ಯಾಪ್ಟಾಪ್, ಎಟಿಎಂ ಕಾರ್ಡ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ರು.