![](https://kannadadunia.com/wp-content/uploads/2023/12/Leelavathi-actress.png)
ಬೆಂಗಳೂರು: ನೆಲಮಂಗಲ ತಾಲೂಕು ಸೋಲದೇವನಹಳ್ಳಿ ತೋಟದಲ್ಲಿ ನಟಿ ಲೀಲಾವತಿ ಅವರ ಸಮಾಧಿ ಬಳಿ ಪುತ್ರ ವಿನೋದ್ ರಾಜ್ ತಾಯಿ ಸ್ಮರಣಾರ್ಥ 55 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸ್ಮಾರಕಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಚಾಲನೆ ನೀಡಿದ್ದಾರೆ.
ಹಿರಿಯ ನಟಿ ಡಾ. ಎಂ. ಲೀಲಾವತಿ ಅಭಿನಯದ ಚಿತ್ರಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿವೆ. ಅವರ ಸಮಾಜಮುಖಿ ಸೇವೆಗಳು ಮಾದರಿಯಾಗಿವೆ. ಲೀಲಾವತಿಯವರ ಸ್ಮರಣಾರ್ಥ ವಿನೋದ್ ರಾಜ್ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನಟ ವಿನೋದ್ ರಾಜ್ ಮಾತನಾಡಿ, ಅಮ್ಮನ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. 55 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದು, ಮೊದಲ ಸಿನಿಮಾದಿಂದ ಕೊನೆಯ ಸಿನಿಮಾದವರೆಗೆ ಗ್ಯಾಲರಿ ನಿರ್ಮಿಸಲಾಗುವುದು. ಇದನ್ನು ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಶಾಸಕ ಎಂ, ಶ್ರೀನಿವಾಸ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್. ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.