ಬೆಳಗಾವಿ: ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸುತ್ತಿರುವ ವಂತಿಗೆಯನ್ನು ಹೆಚ್ಚಿಸುವ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ(ತಿದ್ದುಪಡಿ) ವಿಧೇಯಕ -2024ಕ್ಕೆ ವಿಧಾನಸಭೆಯಲ್ಲಿ ಅನುಮೂದನೆ ನೀಡಲಾಗಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ವಿಧೇಯಕಕ್ಕೆ ಅನುಮೋದನೆ ಕೋರಿ ಮಾತನಾಡಿ, ರಾಜ್ಯದ ಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕರ ಕಲ್ಯಾಣ ನಿಧಿಗೆ ಪ್ರತಿ ಕಾರ್ಮಿಕರಿಂದ ವಾರ್ಷಿಕ 20 ರೂ., ಮಾಲೀಕರಿಂದ 40 ರೂ., ಸರ್ಕಾರದಿಂದ 20 ರೂ. ವಂತಿಗೆ ಪಡೆಯಲಾಗುತ್ತದೆ. ಆದರೆ ಪ್ರತಿ ವರ್ಷ ನಿಧಿ ಸಂಗ್ರಹ ಮೊತ್ತಕ್ಕಿಂತ ವೆಚ್ಚವು ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
42 ಲಕ್ಷ ಕಾರ್ಮಿಕರಿಂದ ವಂತಿಗೆ ಸಂಗ್ರಹಿಸುತ್ತಿದ್ದು, 2022-23ರಲ್ಲಿ 34 ಕೋಟಿ ರೂ. ಸಂಗ್ರಹವಾಗಿದ್ದು, 53 ಕೋಟಿ ರೂ. ವೆಚ್ಚವಾಗಿದೆ. 2023 -24 ರಲ್ಲಿ 57 ಕೋಟಿ ರೂ. ಖರ್ಚಾಗಿದೆ. ವಂತಿಗೆ ಮೊತ್ತವನ್ನು ಪ್ರತಿ ಕಾರ್ಮಿಕರಿಂದ 50 ರೂ., ಮಾಲೀಕರಿಂದ 100 ರೂ., ಸರ್ಕಾರರಿಂದ 50 ರೂ. ವಂತಿಗೆ ಸಂಗ್ರಹಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ 105 ಕೋಟಿ ರೂಪಾಯಿ ಸಂಗ್ರಹವಾಗಲಿದ್ದು, ಕಾರ್ಮಿಕರ ಕಲ್ಯಾಣಕ್ಕೆ ಅಗತ್ಯ ಹಣ ದೊರೆಯಲಿದೆ ಎಂದು ತಿಳಿಸಿದ್ದಾರೆ. ಈ ವಿಧೇಯಕವನ್ನು ಶಾಸಕರು ಪಕ್ಷಾತೀತವಾಗಿ ಸ್ವಾಗತಿಸಿ ಅನುಮೋದನೆ ನೀಡಿದ್ದಾರೆ.