ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಎರಡನೇ ಮತ್ತು ಅಂತಿಮ ಕಂತಿನ 4078.85 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳನ್ನು ವಿಧಾನ ಮಂಡಲದಲ್ಲಿ ಸರ್ಕಾರ ಗುರುವಾರ ಮಂಡಿಸಿದೆ.
530 ಕೋಟಿ ರೂ.ಗಳನ್ನು ಕೇಂದ್ರ ಸಹಾಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ನೀಡಲಾಗಿದೆ. ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟರ ಉಪಯೋಜನೆಯಡಿ ಹೆಚ್ಚುವರಿ ಅನುದಾನ ಕಲ್ಪಿಸಲಾಗಿದೆ. ಕೃಷಿ, ತೋಟಗಾರಿಕೆ, ಶಕ್ತಿ ಯೋಜನೆ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪಶು ಸಂಗೋಪನೆ, ಆಹಾರ ಇಲಾಖೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಿಗೆ ಹೆಚ್ಚುವರಿ ಮೊತ್ತ ಒದಗಿಸಲಾಗಿದೆ.
ಲೋಕಾಯುಕ್ತ ಕಚೇರಿಯ ಪೊಲೀಸ್ ಮಹಾ ನಿರೀಕ್ಷೆಕರ ವಿಶೇಷ ತನಿಖಾ ತಂಡದ ವಾಹನ ಖರೀದಿಗೆ ಹೆಚ್ಚುವರಿಯಾಗಿ 20 ಲಕ್ಷ ರೂ. ನೀಡಲಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕರು, ಸರ್ಕಾರಿ ಮುಖ್ಯ ಸಚೇತಕರಿಗೆ ವಾಹನ ಖರೀದಿಗೆ 70.50 ಲಕ್ಷ ರೂ., ಶಕ್ತಿ ಯೋಜನೆ ಅನುಷ್ಠಾನಕ್ಕಾಗಿ ಸಾರಿಗೆ ನಿಗಮಗಳಿಗೆ 400 ಕೋಟಿ ರೂ. ಒದಗಿಸಲಾಗಿದೆ.
50,000 ರೂ. ವರೆಗೆ ಅಲ್ಪಾವಧಿ ಬೆಳೆ ಸಾಲ ಮನ್ನಾ ಯೋಜನೆಯಡಿ ಬಾಕಿ ಉಳಿದ ಮೊತ್ತ ಬಿಡುಗಡೆಗೆ 131.30 ಕೋಟಿ ರೂ ನೀಡಲಾಗಿದೆ. ಒಲಿಂಪಿಕ್ ಮಾದರಿ ದಸರಾ ಸಿಎಂ ಕ್ರೀಡಾಕೂಟಕ್ಕಾಗಿ 5 ಕೋಟಿ ರೂಪಾಯಿ, 15ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ 5 ಕೋಟಿ ರೂಪಾಯಿ, ಹಂಪಿ ಉತ್ಸವಕ್ಕೆ 8 ಕೋಟಿ ರೂಪಾಯಿ, ಅನುಭವ ಮಂಟಪ ಕಾಮಗಾರಿ ಬಾಕಿ ಬಿಲ್ ಪಾವತಿಗೆ 50 ಕೋಟಿ ರೂಪಾಯಿ ನೀಡಲಾಗಿದೆ.