ರಾಷ್ಟ್ರೀಯ ಹೆದ್ದಾರಿ 169ಎ ಮಲ್ಪೆ -ತೀರ್ಥಹಳ್ಳಿ ಚತುಷ್ಪಥ ಯೋಜನೆ ಪ್ರಗತಿಯಲ್ಲಿದೆ. ಈ ನಡುವೆ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಯೋಜನೆ ಮತ್ತೆ ಚರ್ಚೆಯಾಗತೊಡಗಿದೆ.
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಲೆನಾಡು -ಕರಾವಳಿ ಸಂಪರ್ಕದ ಆಗುಂಬೆ ಘಾಟ್ ಸುರಂಗ ಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯೋಜನೆಯ ಸಾಧಕ -ಬಾಧಕ ತಿಳಿಯಲು ವಿಸ್ತೃತ ಯೋಜನಾ ವರದಿ ಸಿದ್ದಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನಾ ವರದಿ ಸಿದ್ದಪಡಿಸಲಾಗುತ್ತದೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಸೋಮೇಶ್ವರದಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಸಂಪರ್ಕಿಸುವ 12 ಕಿಲೋಮೀಟರ್ ದೂರವರೆಗೆ 3500 ಕೋಟಿ ವೆಚ್ಚ ಅಂದಾಜು ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುವುದು. ಮಲ್ಪೆ -ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯಡಿ ಸುರಂಗ ನಿರ್ಮಾಣ ಯೋಜನೆ ಸೇರಿಲ್ಲ. ದ್ವಿಪಥ ರಸ್ತೆ ನಿರ್ಮಿಸುವ ಬದಲು ಸುರಂಗ ಯೋಜನೆ ಸೇರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.