ಮೇ 19 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದ ಭೀಕರ ಅಪಘಾತ ಪ್ರಕರಣದಲ್ಲಿ ಇಬ್ಬರು ಟೆಕ್ಕಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಪುಣೆಯ ಅತಿ ಸಿರಿವಂತ ವ್ಯಕ್ತಿಯ ಪುತ್ರನಾಗಿರುವ ಅಪ್ರಾಪ್ತ, ಕಂಠಪೂರ್ತಿ ಮದ್ಯ ಸೇವಿಸಿ ತನ್ನ ಐಷಾರಾಮಿ ಪೋರ್ಷೆ ಕಾರಿನಲ್ಲಿ ಅತಿ ವೇಗದಲ್ಲಿ ಬರುವ ವೇಳೆ ಟೆಕ್ಕಿಗಳು ತೆರಳುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿತ್ತು.
ತನ್ನ ಅಪ್ರಾಪ್ತ ಪುತ್ರ ಅಪಘಾತವೆಸಗಿ ಇಬ್ಬರ ಸಾವಿಗೆ ಕಾರಣವಾದ ವಿಚಾರ ತಿಳಿಯುತ್ತಿದ್ದಂತೆ ಆತನ ತಂದೆ ಮತ್ತು ತಾತ ಪ್ರಕರಣ ಮುಚ್ಚಿ ಹಾಕಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಅಲ್ಲದೆ ಸ್ಥಳೀಯ ಶಾಸಕನು ಸಹ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದರಿಂದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸದೆ ಠಾಣಾ ಜಾಮೀನಿನ ಮೇಲೆ 17 ವರ್ಷದ ಅಪ್ರಾಪ್ತನನ್ನು ಬಿಟ್ಟು ಕಳುಹಿಸಿದ್ದರು.
ಆದರೆ ಯಾವಾಗ ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತೋ ಆಗ ಉನ್ನತ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಮತ್ತೊಮ್ಮೆ ತನಿಖೆಗೆ ಸೂಚಿಸಿದ್ದರು. ಆ ಬಳಿಕ ಅಪ್ರಾಪ್ತನನ್ನು ಮತ್ತು ಆತನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಅಪಘಾತಕ್ಕೂ ಮುನ್ನ ಅಪ್ರಾಪ್ತ ಎರಡು ಪ್ರತಿಷ್ಠಿತ ಬಾರ್ ಗಳಲ್ಲಿ ಮದ್ಯ ಸೇವಿಸಿರುವ ಸಂಗತಿ ಬೆಳಕಿಗೆ ಬಂದಿತ್ತು.
ಹೀಗಾಗಿ ಮದ್ಯ ಸೇವನೆ ಪತ್ತೆ ಹಚ್ಚಲು ಪುಣೆಯ ಸಾಸುನ್ ಆಸ್ಪತ್ರೆಗೆ ಅಪ್ರಾಪ್ತನನ್ನು ಕರೆತಂದಿದ್ದ ಪೊಲೀಸರು ಆತನ ಬ್ಲಡ್ ಸ್ಯಾಂಪಲ್ ನೀಡಿದ್ದರು. ಈ ಸ್ಯಾಂಪಲ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದಾಗ ಮದ್ಯ ಸೇವಿಸಿರುವ ಅಂಶ ಪತ್ತೆಯಾಗಿರಲಿಲ್ಲ. ಆಗ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಅಪ್ರಾಪ್ತನ ತಂದೆ ವೈದ್ಯರಿಗೆ ಕರೆ ಮಾಡಿ ಬ್ಲಡ್ ಸ್ಯಾಂಪಲ್ ಬದಲಿಸಲು ಮನವಿ ಮಾಡಿದ್ದ ಎನ್ನಲಾಗಿದ್ದು, ಅಲ್ಲದೆ ಇದಕ್ಕಾಗಿ ಆಸ್ಪತ್ರೆಯಲ್ಲಿ ಜವಾನ ಆಗಿದ್ದ ಅತುಲ್ ಎಂಬಾತನನ್ನು ಮಧ್ಯವರ್ತಿಯನ್ನಾಗಿಸಿ ವೈದ್ಯರುಗಳಾದ ಅಜಯ್ ತಾವಡೆ ಹಾಗೂ ಹರಿ ಎಂಬವರಿಗೆ ಮೂರು ಲಕ್ಷ ರೂಪಾಯಿ ತಲುಪಿಸಿದ್ದ ಎನ್ನಲಾಗಿದೆ.
ಹಣದಾಸೆಗೆ ಬಿದ್ದ ಈ ಇಬ್ಬರು ವೈದ್ಯರು ಅಪ್ರಾಪ್ತನ ಬ್ಲಡ್ ಸ್ಯಾಂಪಲ್ ಅನ್ನು ಕಸದ ಬುಟ್ಟಿಗೆ ಹಾಕಿ ಮತ್ತೊಬ್ಬರ ಬ್ಲಡ್ ಸ್ಯಾಂಪಲ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು ಎಂಬುದು ತಿಳಿದು ಬಂದಿದೆ. ಆದರೆ ಪೊಲೀಸರಿಗೆ ಅನುಮಾನವಿದ್ದ ಕಾರಣ ಅಪ್ರಾಪ್ತನ ತಂದೆಯ ಡಿಎನ್ಎ ಸ್ಯಾಂಪಲ್ ಪಡೆದು ತಜ್ಞರಿಂದ ಪರಿಶೀಲನೆ ನಡೆಸಿದ ವೇಳೆ ಬ್ಲಡ್ ಸ್ಯಾಂಪಲ್ ಬದಲಾಗಿರುವುದು ಗೊತ್ತಾಗಿತ್ತು. ಇದೀಗ ಆ ಇಬ್ಬರು ವೈದ್ಯರು ಹಾಗೂ ಮಧ್ಯವರ್ತಿಯಾಗಿದ್ದ ಜವಾನನನ್ನು ಬಂಧಿಸಲಾಗಿದೆ.