ದೇಶದ ಬ್ಯಾಂಕುಗಳಲ್ಲಿ ಬಹಳ ಕಾಲದಿಂದ ಯಾವುದೇ ಚಟುವಟಿಕೆ ಕಾಣದೇ ಇರುವ ಖಾತೆಗಳಲ್ಲಿ ಒಟ್ಟಾರೆ 26,697 ಕೋಟಿ ರೂಪಾಯಿಗಳು ಇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಡಿಸೆಂಬರ್ 1ರ ಅನ್ವಯ, ಇಷ್ಟು ಪ್ರಮಾಣದ ದುಡ್ಡು 9 ಕೋಟಿ ಖಾತೆಗಳಲ್ಲಿ ಇದ್ದು, ಕಳೆದ 10 ವರ್ಷಗಳಿಂದ ಯಾವುದೇ ಬಳಕೆಯನ್ನು ಕಂಡಿಲ್ಲ ಎನ್ನಲಾಗಿದೆ.
ಡಿಸೆಂಬರ್ 31, 2020ರಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿದ ಮಾಹಿತಿ ಪ್ರಕಾರ ಇಂಥ ಖಾತೆಗಳ ಒಟ್ಟಾರೆ ಸಂಖ್ಯೆಯು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಲ್ಲಿ 8,13,34,849 ಇದ್ದು, ಇಂಥ ಖಾತೆಗಳಲ್ಲಿ ಒಟ್ಟಾರೆ 23,356 ಕೋಟಿ ರೂ.ಗಳು ಜಮೆಯಾಗಿವೆ ಎಂದು ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಕೊಟ್ಟ ಉತ್ತರವೊಂದರಲ್ಲಿ ತಿಳಿಸಿದ್ದಾರೆ.
ನಗರ ಸಹಕಾರಿ ಬ್ಯಾಂಕುಗಳಲ್ಲಿ ಕಳೆದ 10 ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳು 77,03,819 ಇದ್ದು, ಇವುಗಳಲ್ಲಿ ಒಟ್ಟಾರೆ 2,341 ಕೋಟಿ ರೂ.ಗಳಷ್ಟು ದುಡ್ಡು ಇರುವುದಾಗಿ ಸೀತಾರಾಮನ್ ತಿಳಿಸಿದ್ದಾರೆ.
ಆರ್‌ಬಿಐ ನಿರ್ದೇಶನದ ಪ್ರಕಾರ, ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ನಿಷ್ಕ್ರಿಯಗೊಂಡಿರುವ ಖಾತೆಗಳ ವಾರ್ಷಿಕ ವಿಶ್ಲೇಷಣೆಯನ್ನು ಬ್ಯಾಂಕುಗಳು ಮಾಡಬೇಕಿದೆ. ಈ ಖಾತೆಗಳ ಗ್ರಾಹಕರಿಗೆ ಖಾತೆಗಳು ನಿಷ್ಕ್ರಿಯಗೊಂಡಿರುವ ಕಾರಣ ಕೋರಿ ಬರಹದ ಮೂಲಕ ತಿಳುವಳಿಕೆ ನೀಡಬೇಕಾಗುತ್ತದೆ.