ಬೆಂಗಳೂರು: ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕಳ್ಳ ಬೇಟೆ ನಿಗ್ರಹ ಶಿಬಿರಗಳಲ್ಲಿನ ಸಿಬ್ಬಂದಿಗೆ ದಿನವೊಂದಕ್ಕೆ ನೀಡುವ ಆಹಾರಧಾನ್ಯ ಭತ್ಯೆಯನ್ನು ಪ್ರಸ್ತುತ 80 ರೂ.ನಿಂದ 100 ರೂ.ಗೆ ಹೆಚ್ಚಿಸಲಾಗಿದ್ದು, ಇನ್ನಷ್ಟು ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸ ಸೌಧದಲ್ಲಿನ ಕಚೇರಿಯಲ್ಲಿ ಹುಲಿ ಸಂರಕ್ಷಣಾ ಪ್ರತಿಷ್ಠಾನದ 15ನೇ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರಣ್ಯದೊಳಗೆ ಕಳ್ಳ ಬೇಟೆ ನಿಗ್ರಹ ಶಿಬಿರಗಳಲ್ಲಿ ಹಗಲಿರಲು ದುಡಿಯುವ ಸಿಬ್ಬಂದಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದ್ದು, ಹಣಕಾಸು ಇಲಾಖೆ ಅನುಮೋದನೆಗಾಗಿ ಕಡತ ಸಲ್ಲಿಸಲಾಗಿದೆ. ಶೀಘ್ರವೇ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದ್ದಾರೆ.
ಭದ್ರಾ ಅರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಲು ಸಭೆಯಲ್ಲಿ ಹನುಮತಿ ನೀಡಲಾಗಿದೆ. ನಾಗರಹೊಳೆ, ಬಂಡಿಪುರ, ಬಿ.ಆರ್.ಟಿ. ಸೇರಿದಂತೆ ರಾಜ್ಯದ ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಲಂಟನಾ, ಸನ್ನಾ ಇತರೆ ಕಳೆಗಳನ್ನು ತೆರವುಗೊಳಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕೆ ಮೂರು ಮಿನಿ ಬಸ್ ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಿಧಾನಸೌಧ ಮುಂಭಾಗ ಸಚಿವರು ಹಸಿರು ನಿಶಾನೆ ತೋರಿದ್ದಾರೆ.