ಹಾವೇರಿ: ಕೇಂದ್ರ ಸರ್ಕಾರದ ವತಿಯಿಂದ ಬಿಡುಗಡೆ ಮಾಡಿದ ಬರ ಪರಿಹಾರದ ಹಣ ವಿತರಿಸುವ ರಾಜ್ಯ ಸರ್ಕಾರ ರೈತರಿಗೆ ಈ ಮೊದಲು ನೀಡಿದ 2000 ರೂ. ಕಡಿತ ಮಾಡುತ್ತಿರುವುದು ರೈತರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ನೀಡಿದ ಬರ ಪರಿಹಾರವನ್ನು ವಿತರಿಸುವಾಗ ರಾಜ್ಯ ಸರ್ಕಾರ ಈ ಮೊದಲು ನೀಡಿದ್ದ 2 ಸಾವಿರ ರೂ. ಕಡಿತ ಮಾಡಿಕೊಂಡು ನೀಡಲಾಗುತ್ತಿದೆ. ಬರ ಪರಿಹಾರವನ್ನು ರೈತರ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಬರದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಿದ್ದು, ಅದನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡರೆ ರೈತರಿಗೆ ಹೇಗೆ ಪರಿಹಾರ ನೀಡಿದಂತಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದು, ರಾಜ್ಯದಿಂದಲೇ ರೈತರ ಸಾಲ ಮನ್ನಾ ಮಾಡುವುದನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.