ಚೆನ್ನೈ: ಬ್ಯಾಂಕ್ ನಲ್ಲಿ 20 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಚೆನ್ನೈನ ಆರುಂಬಕ್ಕಂನಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಕೃತ್ಯವೆಸಗಿದ್ದಾರೆ. ಫೆಡರಲ್ ಬ್ಯಾಂಕ್ ಅಂಗ ಸಂಸ್ಥೆಯಲ್ಲಿ ಚಿನ್ನಾಭರಣ ದರೋಡೆ ಮಾಡಲಾಗಿದ್ದು, ದರೋಡೆಕೋರರ ಬಂಧನಕ್ಕಾಗಿ ಚೆನ್ನೈ ಪೊಲೀಸರು ಬಲೆ ಬೀಸಿದ್ದಾರೆ.
ಫೆಡ್ ಬ್ಯಾಂಕ್ ಫಾಸ್ಟ್ ಗೋಲ್ಡ್ ಲೋನ್ಸ್, ಫೆಡರಲ್ ಬ್ಯಾಂಕ್ ನ ಅಂಗಸಂಸ್ಥೆಯಾಗಿದೆ. ಇದು ಚಿನ್ನಾಭರಣಗಳಿಗೆ ಸಾಲ ನೀಡುತ್ತದೆ. ಚೆನ್ನೈನ ಅರುಂಬಕ್ಕಂ ಪ್ರದೇಶದಲ್ಲಿನ ಶಾಖೆಯಲ್ಲಿ 3 ಜನರ ತಂಡವೊಂದು 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ವಿಷಯ ತಿಳಿದು ಪೊಲೀಸರು ಬಂದು ತನಿಖೆ ನಡೆಸಿದಾಗ ಬ್ಯಾಂಕ್ ಉದ್ಯೋಗಿಯೇ ದರೋಡೆ ನಡೆಸಿರುವುದು ಬೆಳಕಿಗೆ ಬಂದಿದೆ.
ಆ ಬ್ಯಾಂಕಿನಲ್ಲಿ 4-5 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇದನ್ನು ಚೆನ್ನಾಗಿ ತಿಳಿದ ಅದೇ ಬ್ಯಾಂಕಿನ ಉದ್ಯೋಗಿ ಮುರುಗನ್ ತನ್ನ ಸಹಚರರೊಂದಿಗೆ ಬ್ಯಾಂಕ್ ಅರಿವಳಿಕೆ ಬೆರೆಸಿದ ತಂಪು ಪಾನೀಯ ಬ್ಯಾಂಕ್ ಸಿಬ್ಬಂದಿಗೆ ನೀಡಿದ್ದಾನೆ. ಪ್ರಜ್ಞಾಹೀನರಾದಾಗ ಅವರನ್ನು ಕಟ್ಟಿ ಹಾಕಿ ಬ್ಯಾಂಕ್ ನೌಕರರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ ದೋಚಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುರುಗನ್ ಹಾಗೂ ಆತನ ಸಹಚರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ದರೋಡೆ ಘಟನೆ ಕುರಿತು ಮಾತನಾಡಿದ ಉತ್ತರ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಅನ್ಬು, ಇದುವರೆಗೆ ಅದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮುರುಗನ್ ಎಂಬ ನೌಕರನು ಯೋಜಿತವಾಗಿ ದರೋಡೆಯಲ್ಲಿ ತೊಡಗಿರುವುದು ಗೊತ್ತಾಗಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡುವ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕಿದ್ದು, ದರೋಡೆಕೋರರ ಬಂಧನಕ್ಕೆ ಬಲೆ ಬೀಸಲಾಗಿದೆ. ದರೋಡೆಕೋರರ ಪತ್ತೆಗೆ 4 ವಿಶೇಷ ಪಡೆಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.