ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ತಿಪ್ಪೇರುದ್ರಸ್ವಾಮಿ ರಥಕ್ಕೆ 2.50 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಗುರುವಾರ ವಿಮೆಗೆ ಸಂಬಂಧಿಸಿದಂತೆ ಪಾಲಿಸಿಯ ಪ್ರತಿಯನ್ನು ಕಂಪನಿಯ ಪ್ರತಿನಿಧಿಗಳು ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗೆ ನೀಡಿದ್ದಾರೆ.
ದಾವಣಗೆರೆ ಸರ್ಕಲ್ ನ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ವಿಭಾಗೀಯ ವ್ಯವಸ್ಥಾಪಕ ದೇವದಾಸ್ ಮಾತನಾಡಿ, ಒಂದು ವರ್ಷದ ಅವಧಿಗೆ ರಥಕ್ಕೆ 2.50 ಕೋಟಿ ರೂ. ವಿಮೆ ನೀಡಲಾಗಿದೆ. ಇದಕ್ಕಾಗಿ 24,462 ರೂ. ಕಂತಿನ ಹಣವನ್ನು ದೇವಾಲಯ ವತಿಯಿಂದ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಮಾ. 26 ರಂದು ನಾಯಕನಹಟ್ಟಿ ಜಾತ್ರೆ ನಡೆಯಲಿದೆ. ಚಿತ್ರದುರ್ಗ ಮಾತ್ರವಲ್ಲದೇ ರಾಜ್ಯ, ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ಭಕ್ತರಿಗೆ ಕುಡಿಯುವ ನೀರು, ನೆರಳು, ಸುಗಮ ದರ್ಶನ ಸೇರಿ ಎಲ್ಲ ವ್ಯವಸ್ಥೆ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಜಾತ್ರೆಯ ಸಂದರ್ಭದಲ್ಲಿ ಮುಕ್ತಿ ಬಾವುಟ ಹರಾಜು ಹಾಕಲಾಗುತ್ತದೆ. ಇದನ್ನು ಪಡೆದವರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಶ್ರೀಮಂತರು, ರಾಜಕಾರಣಿಗಳು, ಉದ್ಯಮಿಗಳು ಪೈಪೋಟಿಗೆ ಬಿದ್ದು ಖರೀದಿಸುತ್ತಾರೆ.