![](https://kannadadunia.com/wp-content/uploads/2022/06/Dinesh-Gundu-Rao.jpg)
ಬೆಂಗಳೂರು : ರಾಜ್ಯದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಮತ್ತು ಆರೋಗ್ಯ ಸೇವೆಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ ಬೂಸ್ಟರ್ ಡೋಸ್ ಆಗಿದೆ. ಆರೋಗ್ಯ ವಲಯಕ್ಕೆ ಮಹತ್ವದ ಯೋಜನೆಗಳನ್ನು ಘೋಷಿಸಿ ಬರೋಬ್ಬರಿ 15,145 ಕೋಟಿ ರೂಪಾಯಿ ಅನುದಾನ ನೀಡಿರುವುದು ಶ್ಲಾಘನೀಯವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಶೇಷವಾಗಿ ಗ್ರಾಮೀಣ ಭಾಗ ಮತ್ತು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಅನುದಾನ ಘೋಷಿಸುವ ಮೂಲಕ ಸನ್ಯಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಡಜನರ ಪಾಲಿಗೆ ವರದಾನವಾಗಿದ್ದಾರೆ ಎಂದರು.
ಕ್ಯಾನ್ಸರ್ ಪೀಡಿತ ಬಡರೋಗಿಗಳಿಗೆ ಕೈಗೆಟುವಂತೆ ಪ್ರತಿ ಜಿಲ್ಲೆಗೊಂದು ಕಿಮೋಥೆರಪಿ ಕೇರ್ ಸ್ಥಾಪಿಸಿ ಕ್ಯಾನ್ಸರ್ ಪೀಡಿತರಿಗೆ ಬೆನ್ನೆಲುಬಾಗಿ ನಿಲ್ಲಲಾಗಿದೆ. ಹಲವು ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆ ಸೇರಿದಂತೆ ತಾಲೂಕು ಮಟ್ಟದಲ್ಲೂ ಆಸ್ಪತ್ರೆ ಹಾಗೂ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಮಹೋನ್ನತ ಉದ್ದೇಶದೊಂದಿಗೆ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬರಪೂರ ಕೊಡುಗೆಗಳನ್ನು ನೀಡಲಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದಂತಹ, ತಾರತಮ್ಯವಿಲ್ಲದ ಬಜೆಟ್ ನೀಡುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದ್ದು ರಾಜ್ಯದ ಜನರಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ ಎಂದರು.