
ಶಿವಮೊಗ್ಗ: ಆರ್‌ಟಿಐ ಅಡಿ ಮಾಹಿತಿ ನೀಡದ ಕುವೆಂಪು ವಿವಿ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗದ ಉಪಕುಲ ಸಚಿವ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಡಾ. ಸುರೇಶ್ ಅವರಿಗೆ ರಾಜ್ಯ ಮಾಹಿತಿ ಆಯುಕ್ತರು 10,000 ರೂ. ದಂಡ ವಿಧಿಸಿದ್ದಾರೆ.
ವಾಹನ ಚಾಲಕರು ಮತ್ತು ಇತರೆ ಖಾಲಿ ಇರುವ, ಮುಂದೆ ಖಾಲಿಯಾಗುವ ಹುದ್ದೆಗಳ ನೇರ ನೇಮಕಾತಿ ಮಾಡಿಕೊಳ್ಳದೆ ಬಾಹ್ಯ ಮೂಲಗಳ ಮೂಲಕ ಪಡೆದುಕೊಳ್ಳಬೇಕೆಂದು ಸರ್ಕಾರ 2005 ರಿಂದ 2018ರವರೆಗೆ ಹಲವು ಸುತ್ತೋಲೆ ಆದೇಶ ಹೊರಡಿಸಿದೆ.
ಆದರೂ 2018 ರಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ಮೀಸಲು ಕೋಟಾದಲ್ಲಿ 7 ಅಟೆಂಡರ್, ಅಡುಗೆ ಸಹಾಯಕರು ಜವಾನ ಮತ್ತು ಕಾವಲುಗಾರ ಹುದ್ದೆಗಳ ನೇರ ನೇಮಕ ಮೂಲಕ ಭರ್ತಿ ಮಾಡಲಾಗಿತ್ತು. ಈ ಕುರಿತು ಗಜಾನನ ದಾಸ್ ಎಂಬುವರು 2022 ರಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದ್ದರೂ ಅಗತ್ಯ ಮಾಹಿತಿ ನೀಡಿರಲಿಲ್ಲ.
ಆಯೋಗದ ಆದೇಶದಂತೆ ಕ್ರಮ ವಹಿಸಲು ಮೇಲ್ಮನವಿದಾರರಿಗೆ ಮಾಹಿತಿ ಒದಗಿಸಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಪ್ರತಿವಾದಿ ಆಯೋಗಕ್ಕೆ ಸಲ್ಲಿಸಿಲ್ಲ. ವಿಚಾರಣೆಗೂ ಗೈರು ಹಾಜರಾಗಿದ್ದಾರೆ. ಕಾಯ್ದೆ ಅಡಿಯಲ್ಲಿ ನೀಡಿದ್ದ ಶೋಕಾಸ್ ನೋಟಿಸ್ ಗೆ ಲಿಖಿತ ಸಮಜಾಯಿಷಿ ಸಲ್ಲಿಸಿಲ್ಲ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ ಅಧಿಕಾರ ಚಲಾಯಿಸಿ ಪ್ರತಿವಾದಿ ಡಾ. ಸುರೇಶ್ ಅವರ ವೇತನದಿಂದ 10,000 ರೂ.ಗಳನ್ನು ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮೆ ಮಾಡಿ ರಶೀದಿಯೊಂದಿಗೆ ವರದಿ ಸಲ್ಲಿಸುವಂತೆ ಕುವೆಂಪು ವಿವಿ ಕುಲಪತಿಗೆ ಆದೇಶ ನೀಡಿದೆ.