ಜೈಪುರ: ಜೈವಿಕ ಇಂಧನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಂದ್ರ ಸಿಂಗ್ ರಾಥೋಡ್ ಅವರ ನಿವಾಸದಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಆಭರಣ ಸೇರಿದಂತೆ ಲೆಕ್ಕಕ್ಕೆ ಸಿಗದ ಸಂಪತ್ತು ಪತ್ತೆಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ 5 ಲಕ್ಷ ಲಂಚ ಪಡೆಯುತ್ತಿದ್ದ ರಾಥೋಡ್ ಅವರನ್ನು ಬಂಧಿಸಲಾಗಿತ್ತು. ಜೈವಿಕ ಇಂಧನ ಪ್ರಾಧಿಕಾರವು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ರಾಜಸ್ಥಾನ ಸರ್ಕಾರದ ಘಟಕವಾಗಿದೆ. ಗುರುವಾರ ತಡರಾತ್ರಿಯವರೆಗೂ ನಡೆದ ದಾಳಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ರಾಥೋಡ್ ಅವರ ಮನೆಯಲ್ಲಿ ದಾಖಲೆಗಳು ಮತ್ತು ದುಬಾರಿ ಮದ್ಯವನ್ನು ಪತ್ತೆಹಚ್ಚಿದ್ದಾರೆ. ಅವರ ವಿರುದ್ಧ ಜ್ಯೋತಿ ನಗರ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣವನ್ನೂ ದಾಖಲಿಸಲಾಗಿದೆ.
ಎಸಿಬಿ ಮಹಾನಿರ್ದೇಶಕ ಬಿ.ಎಲ್. ಸೋನಿ ಮಾತನಾಡಿ, ತಂಡವು ಗುರುವಾರ ಅವರ ನಿವಾಸದ ಮೇಲೆ ದಾಳಿ ಮಾಡಲು ಹೋದಾಗ, ಅವರು ಎಸಿಬಿ ಏನು ಮಾಡಬಹುದು ಎಂದು ನಮಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದರು ಎಂದರು.
ನಾನು 1,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದೇನೆ ಎಂದು ಅವರು ಹೇಳಿದರು. ಆರೋಪಿ ರಾಥೋಡ್ ಅವರು ತಮ್ಮ ವ್ಯಾಪಾರವನ್ನು ನಿರಂತರ ನಡೆಸಲು ಮತ್ತು ಪರವಾನಗಿ ನವೀಕರಣಕ್ಕಾಗಿ ಬುಧವಾರ ದೂರುದಾರರಿಂದ 20 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ತಂಡವು 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ರಾಥೋಡ್ ಮತ್ತು ಗುತ್ತಿಗೆ ಕೆಲಸಗಾರ ದೇವೇಶ್ ಶರ್ಮಾ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ಜೈಪುರ ನಗರದ ಅವರ ನಿವಾಸ, ಫಾರ್ಮ್ ಹೌಸ್ ಮತ್ತು ಅಪಾರ್ಟ್ ಮೆಂಟ್ ಸೇರಿದಂತೆ ನಾಲ್ಕು ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.
ಸುಮಾರು 4 ಕೋಟಿ ನಗದು, ಫ್ಲ್ಯಾಟ್, ಅಂಗಡಿ, ತೋಟದ ಮನೆ ಸೇರಿದಂತೆ 20 ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಜಾಗ್ವಾರ್, ಲ್ಯಾಂಡ್ ರೋವರ್, ಬಲೆನೊ, ಫಾರ್ಚುನರ್ ಮತ್ತು ಮಹೇಂದ್ರ ಥಾರ್ ಸೇರಿದಂತೆ ನಾಲ್ಕು ಐಷಾರಾಮಿ ವಾಹನಗಳನ್ನು ಹೊಂದಿರುವುದು ಪತ್ತೆಯಾಗಿದೆ. ಅವರ ಮಗ ಗಣಿಗಾರಿಕೆ ನಡೆಸುತ್ತಿದ್ದಾನೆ. ವಶಪಡಿಸಿಕೊಂಡ ಅಪಾರ ಪ್ರಮಾಣದ ನಗದನ್ನು ನಿಖರವಾಗಿ ಲೆಕ್ಕ ಹಾಕಲು ಎಸಿಬಿ ತಂಡ ಮತ ಎಣಿಕೆ ಯಂತ್ರಗಳನ್ನು ಬಳಸಿದೆ. ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.