ಬೆಂಗಳೂರು: ಕಾನೂನುಬಾಹಿರವಾಗಿ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟು ಹಂಚಿಕೆ ಮಾಡಿದ ಆರೋಪದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ಕ್ಕೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್, ನ್ಯಾಯಮೂರ್ತಿ ಟಿ.ಜೆ. ಶಿವಶಂಕರೇಗೌಡ ಅವರ ವಿಭಾಗೀಯ ಪೀಠದಲ್ಲಿ ಡಾ. ಡಿ. ರಾಜೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಆದೇಶ ನೀಡಲಾಗಿದೆ.
ಕಾನೂನುಬಾಹಿರವಾಗಿ ರೆಸ್ಪರೇಟರಿ ಇನ್ ಮೆಡಿಸಿನ್(ಉಸಿರಾಟಕ್ಕೆ ಸಂಬಂಧಿಸಿದ) ವಿಭಾಗದಲ್ಲಿ ಜೆ. ಪ್ರದೀಪ್ ಎಂಬುವರಿಗೆ ಹಂಚಿಕೆಯಾಗಿದ್ದ ಸೀಟನ್ನು ರದ್ದುಪಡಿಸಿ ಅರ್ಜಿದಾರ ಡಾ.ಡಿ. ರಾಜೇಶ್ ಕುಮಾರ್ ಅವರಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ದಾಖಲೆ ಪರಿಶೀಲನೆ ನಂತರ ಅರ್ಜಿದಾರರು ಸೂಕ್ತ ಸಮಯಕ್ಕೆ ಎನ್.ಒ.ಸಿ. ನೀಡಿಲ್ಲ ಎಂದು ಕೆಇಎ ವಾದ ಮಂಡಿಸಿದ್ದು, ಇದನ್ನು ನ್ಯಾಯಪೀಠ ತಳ್ಳಿ ಹಾಕಿದೆ. ಪ್ರಾರಂಭಿಕ ಹಂತದಲ್ಲಿ ದಾಖಲೆಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಲಾಗಿದೆ.
ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡದೆ ಸೀಟು ಹಂಚಿಕೆ ರದ್ದು ಮಾಡಿರುವುದು ಕಾನೂನುಬಾಹಿರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು ಪ್ರಾಧಿಕಾರಕ್ಕೆ ದಂಡ ವಿಧಿಸಿದೆ.