ಬೆಂಗಳೂರು: 1.19 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಗುದದ್ವಾರದಲ್ಲಿಟ್ಟುಕೊಂಡು ಕಳ್ಳ ಸಾಗಣೆ ಮಾಡುತ್ತಿದ್ದ ಶ್ರೀಲಂಕಾ ಪ್ರಜೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಪೇಸ್ಟ್ ಮಾದರಿಯ ಚಿನ್ನವನ್ನು ಮಾತ್ರೆಗಳು ಹಾಗೂ ಚಿನ್ನದ ಬಿಸ್ಕತ್ ಗಳನ್ನು ಬಚ್ಚಿಟ್ಟುಕೊಂಡು ಕಳ್ಳ ಸಾಗಣೆ ಮಾಡಲಾಗುತ್ತಿತ್ತು. ಬಂಧಿತ ಶ್ರೀಲಂಕಾ ಪ್ರಜೆಯಿಂದ 1.19 ಕೋಟಿ ರೂಪಾಯಿ ಮೌಲ್ಯದ 1 ಕೆಜಿ 670 ಗ್ರಾಂ ತೂಕದ ಚಿನ್ನ ಜಪ್ತಿ ಮಾಡಲಾಗಿದೆ.
ಆಗಸ್ಟ್ 31 ರಂದು ರಾತ್ರಿ ಶ್ರೀಲಂಕಾದ ಕೊಲಂಬೋದಿಂದ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ. ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರ ತಪಾಸಣೆ ಮಾಡುವಾಗ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸಿದ್ದು, ಆತನನ್ನು ವಶಕ್ಕೆ ಪಡೆದು ಕೂಲಂಕಷವಾಗಿ ತಪಾಸಣೆ ನಡೆಸಲಾಗಿದೆ. ಪರಿಶೀಲನೆ ವೇಳೆ ಆತನ ಗುದದ್ವಾರದಲ್ಲಿ ಪೇಸ್ಟ್ ರೂಪದ ಚಿನ್ನದ ಆರು ಮಾತ್ರೆಗಳು, ಮೂರು ಚಿನ್ನದ ಗಟ್ಟಿಗಳು ದೊರೆತಿವೆ. ಅವುಗಳನ್ನು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.