ರಾಯಲ್ ಎನ್‌ಫೀಲ್ಡ್, ಬೈಕ್ ಪ್ರಿಯರ ಫೇವರಿಟ್. ಈ ಕಂಪನಿಯ ಯಾವುದೇ ಹೊಸ ಮೋಟಾರ್ ಸೈಕಲ್ ರಸ್ತೆಗಿಳಿದರೂ ದೊಡ್ಡ ಹವಾ ಕ್ರಿಯೇಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹೊಸ ಹೊಸ ಮಾಡೆಲ್‌ಗಳಿಗಾಗಿ ಬೈಕ್ ಸವಾರರು ಕಾಯುತ್ತಾರೆ. ರಾಯಲ್ ಎನ್‌ಫೀಲ್ಡ್ ಈ ಹಬ್ಬದ ಋತುವಿನಲ್ಲಿ ನೆಕ್ಸ್ಟ್ ಜನರೇಶನ್‌ನ ಹಿಮಾಲಯನ್ 450 ಅನ್ನು ಬಿಡುಗಡೆ ಮಾಡಲಿದೆ. ಇದರ ಪರೀಕ್ಷಾರ್ಥ ಸವಾರಿ ಕೂಡ ಈಗಾಗ್ಲೇ ನಡೆಯುತ್ತಿದೆ.
ಹೊಸ ಬೈಕ್‌ನ ಫೋಟೋಗಳು ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿವೆ. ಈ ಬೈಕ್ ಕೂಡ ಹಿಮಾಲಯನ್ 450 ನಿರ್ಮಾಣ ಆವೃತ್ತಿಯನ್ನೇ ಹೋಲುತ್ತದೆ. ರಾಯಲ್ ಎನ್‌ಫೀಲ್ಡ್ ಹೊಸ ಮೋಟಾರ್ ಸೈಕಲ್ ಅನ್ನು ಸೂಪರ್ ಮೀಟಿಯರ್‌ನಂತಹ ಎಲ್‌ಇಡಿ ಹೆಡ್‌ಲೈಟ್‌ಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಎಡಿವಿಯ ಎತ್ತರದ ನಿಲುವನ್ನು ಈ ಬೈಕ್‌ನಲ್ಲೂ ಉಳಿಸಿಕೊಳ್ಳಲಾಗಿದೆ.
ಪ್ರಸ್ತುತ ಬಳಕೆಯಲ್ಲಿರೋ ಹಿಮಾಲಯನ್ ಬೈಕ್‌ನಂತೆಯೇ ಹೊಸ 450 ಸಹ ಮುಂಭಾಗದಲ್ಲಿ ಚಾಚಿಕೊಂಡಿರುವ ಚೌಕಟ್ಟನ್ನು ಹೊಂದಿದೆ. ಇಂಧನ ಟ್ಯಾಂಕ್ ಅನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ. ಆಯಿಲ್ ಟ್ಯಾಂಕ್ ಕೊಂಚ ದೊಡ್ಡದಾಗಿದೆ. ಹಿಮಾಲಯನ್ 450 ಹೊಸ ಸ್ವಿಚ್ ಬಟನ್‌ನೊಂದಿಗೆ ಫ್ಲಾಟ್ ಮತ್ತು ವೈಡ್ ಹ್ಯಾಂಡಲ್‌ಬಾರ್ ಅನ್ನು ಪಡೆಯುತ್ತದೆ. ಹೊಸ ಮೋಟಾರ್‌ಸೈಕಲ್ 2 ಪೀಸ್ ಸ್ಪ್ಲಿಟ್ ಸೀಟನ್ನು ಹೊಂದಿದೆ.
ಇದರಲ್ಲಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ 450cc ಎಂಜಿನ್ ಅಳವಡಿಸಲಾಗಿದೆ. ಇದರ ಒಟ್ಟು ಉತ್ಪಾದನೆಯು ಸುಮಾರು 35-40bhp ಮತ್ತು 40Nm ಟಾರ್ಕ್ ಇರಬಹುದೆಂದು ಅಂದಾಜಿಸಲಾಗಿದೆ. ADV ಎಂಜಿನ್ ಅನ್ನು ಹೊಚ್ಚ ಹೊಸ 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ.