ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಅನ್ಲಾಕ್ ನಂತರದಲ್ಲಿ ಅಪರಾಧ ಪ್ರಕರಣ ಹೆಚ್ಚಾಗದಂತೆ ನಿಗಾವಹಿಸಿರುವ ಪೊಲೀಸರು ಅಪರಾಧ ಚಟುವಟಿಕೆಯಲ್ಲಿ ತೊಡಗಿದ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಾಲಕಾಲಕ್ಕೆ ರೌಡಿ ಆಸಾಮಿಗಳನ್ನು ಕರೆಸಿ ಬುದ್ಧಿಮಾತು ಹೇಳುವುದು, ಪೆರೇಡ್ ನಡೆಸುವುದು ನಡೆಯಲಿದೆ.
ಆದರೆ, ಲಾಕ್ ಡೌನ್ ಕಾರಣದಿಂದ ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಗಳ ಪೆರೇಡ್ ನಡೆಸಿರಲಿಲ್ಲ. ಹೀಗಾಗಿ ನಗರದ 8 ವಲಯಗಳ ಪೊಲೀಸರು ಏಕಕಾಲಕ್ಕೆ ಒಂದು ಸಾವಿರಕ್ಕೂ ಅಧಿಕ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮಾರಕಾಸ್ತ್ರ ಹೊಂದಿದ್ದಾರೆಯೇ? ಅಪರಾಧ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆಯೇ? ನೀಡಿದ್ದ ವಿಳಾಸದಲ್ಲಿ ಇದ್ದಾರೆಯೇ ಎಂಬುದರ ಕುರಿತಾಗಿ ಪರಿಶೀಲನೆ ನಡೆಸಲಾಗಿದೆ.
ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಕೈಗೊಂಡ ತೀರ್ಮಾನದಂತೆ ಇಂದು ಬೆಳಗಿನ ಜಾವ ಏಕಕಾಲಕ್ಕೆ 1 ಸಾವಿರಕ್ಕೂ ಅಧಿಕ ರೌಡಿಗಳ ಮನೆ ಮೇಲೆ ದಾಳಿ ಮಾಡಲಾಗಿದೆ.