
ಆನೇಕಲ್: ಕುಖ್ಯಾತ ರೌಡಿಶೀಟರ್ ನೇಪಾಳಿ ಮಂಜನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬುಗೋಡಿಯ ಗೊಲ್ಲರಹಳ್ಳಿ ಮುಖ್ಯರಸ್ತೆಯಲ್ಲಿ ರೌಡಿಶೀಟರ್ ಹೆಣವಾಗಿದ್ದಾನೆ.
ಇತ್ತೀಚೆಗಷ್ಟೇ ನೇಪಾಳಿ ಮಂಜ, ಕುಟುಂಬ ಸಮೇತ ಕುಣಿಗಲ್ ಗೆ ಶಿಫ್ಟ್ ಆಗಿದ್ದ. ಯುಗಾದಿ ಹಬ್ಬ ಎಂದು ಸ್ನೇಹಿತರು ಕರೆದರೆಂದು ಕುಣಿಗಲ್ ನಿಂದ ಬೆಂಗಳೂರಿಗೆ ಬಂದಿದ್ದ. ಇಬ್ಬರು ಸ್ನೇಹಿತರ ಜೊತೆ ಆನೇಕಲ್ ನ ಗೊಲ್ಲರಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ. ಈ ವೇಳೆ ಎರಡು ಬೈಕ್ ನಲ್ಲಿ ಎಂಟ್ರಿಕೊಟ್ಟಿದ್ದ ಐವರ ಗ್ಯಾಂಗ್ ಲಾಂಗು, ಮಚ್ಚು ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಹತ್ಯೆಗೈದಿದ್ದಾರೆ.
ನೇಪಾಳಿ ಮಂಜ ಕೊಲೆ, ಕೊಲೆಯತ್ನ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕುಟುಂಬವಿದೆ ರೌಡಿ ಕೆಲಸಗಳನ್ನು ಬಿಟ್ಟು ಒಳ್ಲೆಯವರಾಗಿ ಬದುಕುವಂತೆ ಪೊಲೀಸರು ಬುದ್ಧಿವಾದ ಹೇಳಿದ್ದರು. ಆದರೂ ಸ್ನೇಹಿತರು ಕರೆದರೆಂದು ಹೋಗಿ ನೇಪಾಳಿ ಮಂಜ ಹತ್ಯೆಯಾಗಿದ್ದಾನೆ.
ಹೆಬ್ಬುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.