ತಿರುವನಂತಪುರ: ರಾಜ್ಯದಿಂದ ನಾಪತ್ತೆಯಾಗಿ ಐಸಿಸ್ಗೆ ಸೇರಿರುವ ಸುಮಾರು 32,000 ಮಹಿಳೆಯರ ಕಥೆಯನ್ನು ಬಿಂಬಿಸುವ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಮಾಡಿರುವ ಆರೋಪಗಳನ್ನು ಸಾಬೀತುಪಡಿಸುವವರಿಗೆ ಮುಸ್ಲಿಂ ಸಂಘಟನೆಯೊಂದು 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.
ಮುಸ್ಲಿಮ್ ಯೂತ್ ಲೀಗ್ನ ಕೇರಳ ರಾಜ್ಯ ಸಮಿತಿಯು ಈ ಪ್ರಕಟಣೆ ಹೊರಡಿಸಿದೆ. ಸಿನಿಮಾದಲ್ಲಿ ಮಾಡಲಾಗಿರುವ ಆರೋಪಗಳ ಬಗ್ಗೆ ಪುರಾವೆ ಒದಗಿಸಲು ಪ್ರತಿ ಜಿಲ್ಲೆಗಳಲ್ಲೂ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಿಳಿಸಿದೆ. 32,000 ಕೇರಳೀಯರು ಮತಾಂತರಗೊಂಡು ಸಿರಿಯಾಕ್ಕೆ ಪಲಾಯನ ಮಾಡಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಿ. ಸವಾಲನ್ನು ಸ್ವೀಕರಿಸಿ ಮತ್ತು ಸಾಕ್ಷ್ಯ ಸಲ್ಲಿಸಿ ಎಂದು ಸಮಿತಿ ಪೋಸ್ಟರ್ ಹಂಚಿದೆ.
ಮೇ 5 ರಂದು ತೆರೆಗೆ ಬರಲಿರುವ ಈ ಚಿತ್ರದ ಬಗ್ಗೆ ಈಗಾಗಲೇ ರಾಜಕೀಯವಾಗಿ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಕೋಮು ಧ್ರುವೀಕರಣ ಮತ್ತು ಕೇರಳದ ವಿರುದ್ಧ ದ್ವೇಷ ಪ್ರಚಾರ ಮಾಡಲು ಸಿನಿಮಾವನ್ನು ಉದ್ದೇಶಪೂರ್ವಕವಾಗಿ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಇದು ನಿಮ್ಮ ಕೇರಳ ಕಥೆಯಾಗಿರಬಹುದು. ಇದು ನಮ್ಮ ಕೇರಳದ ಕಥೆಯಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಸುದೀಪ್ತೋ ಸೇನ್ ನಿರ್ದೇಶಿಸಿರುವ ವಿಪುಲ್ ಅಮೃತಲಾಲ್ ಶಾ ನಿರ್ಮಿಸಿರುವ ಈ ಚಿತ್ರವು ಮೇ 5, 2023 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ʼದಿ ಕೇರಳ ಸ್ಟೋರಿʼ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.