ಬೆಂಗಳೂರು: ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಇನ್ನು ಮುಂದೆ ರಾಗಿ ಮುದ್ದೆ, ಜೋಳದ ರೊಟ್ಟಿ ನೀಡಲಾಗುವುದು. ಪ್ರಾದೇಶಿಕ ಆಹಾರ ನೀಡಲು ಸರ್ಕಾರ ನಿರ್ಧರಿಸಿದೆ.
ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡುವ ಉದ್ದೇಶದಿಂದ ರಾಗಿಮುದ್ದೆ ಮತ್ತು ಜೋಳದ ರೊಟ್ಟಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರವೇ ಯೋಜನೆ ಆರಂಭವಾಗಲಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದಲ್ಲಿ ಗೋಧಿ ಪಾಯಸ, ಅನ್ನ ಸಾಂಬಾರ್ ನೀಡಲಾಗುತ್ತಿದೆ. ಇದರೊಂದಿಗೆ ಉತ್ತರ ಕರ್ನಾಟಕ ಭಾಗದ ಶಾಲೆಗಳ ಮಕ್ಕಳಿಗೆ ಬಿಸಿಯೂಟದಲ್ಲಿ ಜೋಳದ ರೊಟ್ಟಿ, ದಕ್ಷಿಣ ಕರ್ನಾಟಕ ಭಾಗದ ಮಕ್ಕಳಿಗೆ ರಾಗಿಮುದ್ದೆ ನೀಡುವ ಕುರಿತು ಸಿದ್ಧತೆ ಕೈಗೊಳ್ಳಲಾಗಿದೆ.
ಎಲ್ಲಾ ಭಾಗದಲ್ಲಿಯೂ ಮುದ್ದೆ, ರೊಟ್ಟಿ ತಿನ್ನುವುದಿಲ್ಲ. ಹೀಗಾಗಿ ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ತಾಲೂಕುವಾರು ಮುದ್ದೆ, ರೊಟ್ಟಿ ನೀಡುವ ಬಗ್ಗೆ ಯೋಜನೆ ರೂಪಿಸಿದ್ದು, ಶೀಘ್ರವೇ ಜಾರಿಗೆ ಬರಲಿದೆ ಎನ್ನಲಾಗಿದೆ.
ಸರ್ಕಾರ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಹಾಲು ನೀಡುತ್ತಿದೆ. ಇತ್ತೀಚೆಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಕೂಡ ನೀಡಲಾಗುತ್ತಿದೆ. ಇದರೊಂದಿಗೆ ರಾಗಿ, ಮುದ್ದೆ ಜೋಳದ ರೊಟ್ಟಿ ನೀಡಲು ಕ್ರಮ ಕೈಗೊಳ್ಳಲಾಗಿದೆ.