alex Certify ಆಕರ್ಷಕ ತಾಣಗಳಿಂದ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುವ ರೊಮೇನಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕರ್ಷಕ ತಾಣಗಳಿಂದ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುವ ರೊಮೇನಿಯಾ

ಎಲ್ಲಿ ನೋಡಿದರಲ್ಲಿ ಹಸಿರು, ಸುಂದರ ಪರ್ವತ ಶ್ರೇಣಿಗಳು, ಪೃಕೃತಿಯ ಮಡಿಲಿನಲ್ಲಿಯೇ ಅಡಗಿರುವ ಸುಂದರ ನಗರಗಳು, ಮೈನವಿರೇಳಿಸುವ ವಿನ್ಯಾಸದ ಜಗತ್ಪ್ರಸಿದ್ಧ ಚರ್ಚ್​ಗಳು, ಐತಿಹಾಸಿಕ ಹಿನ್ನೆಲೆಯ ಹಳೆಯ ಕೋಟೆ ಕಟ್ಟಡಗಳು ಇಂಥ ಆಕರ್ಷಕ ತಾಣಗಳಿಂದ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುವ ಯೂರೋಪಿನ ಸುಂದರ ರಾಷ್ಟ್ರ ರೊಮೇನಿಯಾ.

ಹಸಿರ ಹೊನಲಿನಲ್ಲಿರುವ ಸುಂದರ ದೇಶ ರೊಮೇನಿಯಾದ ರಾಜಧಾನಿ ಬುಚರೆಸ್ಟ್. ವಿಶಾಲವಾದ ರಸ್ತೆ, ಕಣ್ಮನ ಸೆಳೆಯೋ ಮಾಡರ್ನ್​ ಬಿಲ್ಡಿಂಗ್ಸ್​, ಸಮೃದ್ಧ ಮರಗಳಿಂದ ತುಂಬಿರುವ ಸುಸಜ್ಜಿತ ಸಿಟಿ ಈ ಬುಚರೆಸ್ಟ್​. ರೊಮೇನಿಯಾ ದೇಶದ ಆಧುನಿಕತೆಯ ವೈಭವವನ್ನ ಹೇಳುವ ಬುಚರೆಸ್ಟ್​ ಪ್ರವಾಸಿಗರನ್ನ ಸೆಳೆಯೋ ಸುಂದರ ನಗರ.

ರೊಮೇನಿಯಾ ಕ್ಯಾಪಿಟಲ್ ಸಿಟಿ​ ಬುಚರೆಸ್ಟ್​ ನ ನಂತರ ಈ ದೇಶದ ಅತ್ಯಂತ ಪ್ರಮುಖ ನಗರ ಅಂದ್ರೆ, ಟ್ರಾನ್ಸಿಲ್​ವೇನಿಯಾ. ರಾಜಕೀಯ, ಹಣಕಾಸು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಬುಚರೆಸ್ಟ್​ ಪ್ರಾಮುಖ್ಯತೆಯನ್ನ ಪಡೆದಿದ್ರೆ, ಟ್ರಾನ್ಸಿಲ್ವೇನಿಯಾ ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ ಮತ್ತು ವ್ಯಾವಹಾರಿಕ ಕೇಂದ್ರ. ಇಡೀ ನಗರಕ್ಕೆ ನಗರವೇ ಉದ್ಯಾನದಂತಿದೆ. ಸುವ್ಯವಸ್ಥಿತ ರಸ್ತೆಗಳು, ಓರಣವಾಗಿ ಕಟ್ಟಲಾದ ಮನೆಗಳು, ಅಲ್ಲಲ್ಲಿ ಅತಿ ಎತ್ತರಕ್ಕೆ ಚಾಚಿರುವ ಭವ್ಯ ಚರ್ಚ್​ಗಳು ಅತಿಥಿಗಳಿಗೆ ಅಹ್ಲಾದದ ಅನುಭವ ನೀಡದೇ ಇರಲಾರವು. ಪುರಾತನ ಐತಿಹಾಸಿಕ ಹಿನ್ನೆಲೆಯಿರುವ ಟ್ರಾನ್ಸಿಲ್ವೇನಿಯಾ ರೊಮೇನಿಯಾದ ಹೃದಯ. ಪ್ರಾಕೃತಿಕವಾಗಿ, ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಟ್ರಾನ್ಸಿಲ್ವೇನಿಯಾಕ್ಕೆ ಸಮೃದ್ಧ ಇತಿಹಾಸವೂ ಇದೆ. ಸ್ಕಿಥಿಯಾನ್ಸ್, ಡಾಶಿಯಾ , ರೋಮನ್​ ಎಂಪಾಯರ್ಸ್​ ಇಂಥ ಹಲವು ಸಾಮ್ರಾಜ್ಯಗಳ ಆಳ್ವಿಕೆಗೆ ಒಳಪಟ್ಟಿದ್ದ ಟ್ರಾನ್ಸಿಲ್ವೇನಿಯಾದಲ್ಲಿರುವ ಪುರಾತನ ಸ್ಮಾರಕಗಳು ಅಚ್ಚರಿ ಹುಟ್ಟಿಸುತ್ತವೆ.

ಟ್ರಾನ್ಸಿಲ್ವೇನಿಯಾದಿಂದ 11 ಮೈಲಿ ದೂರದಲ್ಲಿರುವ ಪ್ರೆಜ್ಮೀರ್ ಫೋರ್ಟಿಫೈಡ್​ ಚರ್ಚ್ ರೊಮ್ಯಾನಿಯಾಕ್ಕೆ ಭೇಟಿ ನೀwuv ಪ್ರವಾಸಿಗರು ನೋಡಲೇ ಬೇಕಾದ ತಾಣ. ಹಂಗೇರಿ ರಾಜ ಎರಡನೇಯ ಕಿಂಗ್ ಆಂಡ್ರ‍್ಯೂ ಕಟ್ಟಿಸಿದ ಭವ್ಯ ಕೋಟೆ ನಿರ್ಮಾಣವಾಗಿದ್ದು, 13ನೇ ಶತಮಾನದಲ್ಲಿ. ಪ್ರಸಿದ್ಧ ಗೋಥಿಕ್​ ಶೈಲಿಯಲ್ಲಿ ಕಟ್ಟಲಾದ ಈ ಚರ್ಚ್​​ ರೊಮೇನಿಯಾದಲ್ಲಿದ್ದ ಹಂಗೇರಿ ರಾಜರಾಳ್ವಿಕೆಯ ಕುರುಹಾಗಿ ನಿಂತಿದೆ.  ಶತಶತಮಾನಗಳು ಕಳೆದುಹೋದ್ರೂ ಈ ಅದ್ಭುತ ಕಟ್ಟಡ ಮಾತ್ರ ಇಂದಿಗೂ ಸದೃಢ..!

ಇನ್ನು ಟ್ರಾನ್ಸಿಲ್ವೇನಿಯಾದಿಂದ 16 ಮೈಲಿ ದೂರದಲ್ಲಿರುವ ಪುರಾತನ ಕಟ್ಟಡ ಬ್ರ್ಯಾನ್​ ಕ್ಯಾಸಲ್​ ಕೂಡ ಅತ್ಯದ್ಭುತ ಪ್ರವಾಸಿ ತಾಣವಾಗಿದೆ. ಗುಡ್ಡದ ತುದಿಯಲ್ಲಿ ದಪ್ಪಗೋಡೆಗಳ ಬ್ರ್ಯಾನ್​ ಕ್ಯಾಸಲ್​​ನಲ್ಲಿ ವಾಸವಿದ್ನಂತೆ ನರಭಕ್ಷಕ ಡ್ರಾಕುಲಾ..!  ಈ ಮಹಾ ಬಂಗಲೆಯಲ್ಲಿಯೇ ಡ್ರಾಕುಲಾ ಮನುಷ್ಯರ ರಕ್ತ ಕುಡಿಯುತ್ತಿದ್ದನಂತೆ..!  ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಬ್ರ್ಯಾನ್​ ಕಾಸ್ಟಲ್​ ಎಂಬ ಮಹಾಮನೆಯಲ್ಲಿ ಭಯಹುಟ್ಟಿಸೋ ಪ್ರೇತಾತ್ಮಗಳು ಇವೆ ಅನ್ನೋ ನಂಬಿಕೆ ಕೂಡ ಇದೆ.  ಆ ಭಯದ ಅನುಭವಕ್ಕಾಗಿಯೇ ಕುತೂಹಲದಿಂದ ಈ ಕೋಟೆಗೆ ಭೇಟಿ ಕೊಡ್ತಾರೆ ಪ್ರವಾಸಿಗರು.

ಯಾವಾಗಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ಇನ್ನೊಂದು ಕೋಟೆಯೇ ರ‍್ಯಾಸ್ನೋವ್​ ಕೋಟೆ. ಇದು ನಿರ್ಮಾಣವಾಗಿದ್ದು 14ನೇ ಶತಮಾನದಲ್ಲಿ..! ಅದೆಷ್ಟೋ ರಾಜರಾಳ್ವಿಕೆಯನ್ನ ಕಂಡಿರೋ ಈ ಕೋಟೆ, ಹಲವು ಬಾರಿ ಹಾನಿಗೊಳಗಾಗಿದ್ದೂ ಇದೆ..!  ಈ ಕೋಟೆಯನ್ನ ಆಳಿರುವ ಹಲವು ಸಾಮ್ರಾಜ್ಯಗಳು ಇದನ್ನ ಹಲವು ರೀತಿಯಲ್ಲಿ ಉಪಯೋಗಿಸಿಕೊಂಡಿವೆಯಂತೆ.  ಈಗ ಈ ಕೋಟೆಯೊಳಗೆ ಪುಟ್ಟ ಪುಟ್ಟ ವ್ಯಾಪಾರಿಗಳ ಪುಟಾಣಿ ಅಂಗಡಿಗಳು ಗಮನ ಸೆಳೆಯುತ್ತವೆ. ಇನ್ನೊಂದು ವಿಶೇಷವೇನಂದ್ರೆ, ಈ ಗುಡ್ಡ ಹತ್ತಿ ಬರೋಕೆ ಪ್ರವಾಸಿಗರಿಗಾಗಿ ಸ್ಪೆಷಲ್​ ವೆಹಿಕಲ್​ಗಳ ವ್ಯವಸ್ಥೆ ಕೂಡ ಇದೆ. ಶತ ಶತಮಾನಗಳಿಂದ  ಇತಿಹಾಸದ ರೋಚಕ ಕಥೆಗಳನ್ನ ಹೇಳ್ತಾ, ಆಳಿಹೋದ ಸಾಮ್ರಾಜ್ಯಗಳ ಕುರುಹುಗಳಾಗಿ, ಆ ಎಲ್ಲ ಇತಿಹಾಸಗಳಿಗೆ ಸಾಕ್ಷಿಯಾಗಿ ನಿಂತಿವೆ ಈ ಎಲ್ಲ ಕೋಟೆ, ಕಟ್ಟಡಗಳು. ಇಂದಿಗೂ ಅಷ್ಟೇ ಸದೃಢ, ಸುಂದರವಾಗಿರುವ ಆ ಎಲ್ಲ ಸ್ಮಾರಕಗಳು ಪ್ರವಾಸಿಗರಿಗೆ ಬೆರಗು ಮೂಡಿಸುತ್ತವೆ. 

ರೊಮೇನಿಯಾದ ನಗರಗಳು ಆಧುನಿಕತೆಯ ಉಚ್ಛ್ರಾಯದಲ್ಲಿದ್ರೂ ರೊಮೇನಿಯಾ ಹಳ್ಳಿಗಳು ಮಾತ್ರ ಅಷ್ಟೇ ಸರಳ..! ಹಸಿರ ಮಧ್ಯೆ ಅಲ್ಲಲ್ಲಿ ಮನೆಗಳ ಗುಂಪು, ಹೊಲದಿಂದ ಫಸಲನ್ನ ಹೊತ್ತು ಹೋಗ್ತಿರೋ ಕುದುರೆಗಳು, ಜಮೀನಿನಲ್ಲಿ ಕೆಲಸ ಮಾಡ್ತಿರೋ ಮಹಿಳೆಯರು, ಸಮೃದ್ಧ ಹುಲ್ಲನ್ನ ಮೇಯುತ್ತಿರೋ ಮೇಕೆಗಳು, ನೀರನ್ನ ಎತ್ತುವ ಏತಮಾದರಿಯ ಚಕ್ರ, ಹರಿಯುವ ಸ್ವಚ್ಛ ನೀರಿನಲ್ಲಿ ಬಟ್ಟೆಒಗೆಯುವ ಮಹಿಳೆ, ಉದುರುವ ಎಲೆಗಳನ್ನ ಸಂಗ್ರಹ ಮಾಡ್ತಿರೋ ನಾರಿ, ಈ ಎಲ್ಲ ದೃಶ್ಯಗಳನ್ನೂ ಕೂಡ ರೊಮೇನಿಯನ್​ ಹಳ್ಳಿಗಳಲ್ಲಿ ನಾವು ನೋಡಬಹುದು. ಖಾಸಗಿ ವಾಹನದ ಮೂಲಕ ಸಿಟಿಯಿಂದ ಹಳ್ಳಿಗೆ ಬರುವ ಪ್ರವಾಸಿಗರಂತೂ.. ತಮ್ಮ ವೆಹಿಕಲ್​​ಗೆ ಸೈಕಲ್​ ಸಿಗಿಸಿಕೊಂಡೇ ಬರ್ತಾರೆ. ಇಲ್ಲಿಯೇ ಸೈಕ್ಲಿಂಗ್​, ಟ್ರೆಕ್ಕಿಂಗ್​, ಮಾಡಿ  ಟೆಂಟ್​ ಹಾಕಿ ಉಳಿದು ಅಲ್ಲಿಯ ಸಮೃದ್ಧ ಪಾಕೃತಿಕ ಸೌಂದರ್ಯದ ಆಹ್ಲಾದವನ್ನ ಅನುಭವಿಸ್ತಾರೆ.

ಇನ್ನು, ರೊಮೇನಿಯನ್​ ಹಳ್ಳಿಗಳಲ್ಲಿ ಪ್ರವಾಸಿಗರನ್ನ ಸೆಳೆಯೋ ಫೇಮಸ್​ ಥಿಂಗ್​ ಏನ್​ ಗೊತ್ತಾ..? ವೆರಿ ಟೇಸ್ಟೀ ಬ್ರೆಡ್​​ ಅಂಡ್​ ಚೀಸ್​..! ಗೋಧಿಹಿಟ್ಟಿನ ಮಿಶ್ರಣವನ್ನ ಹದವಾಗಿ ನಾದಿ, ಹದಗೊಂಡ ಹಿಟ್ಟನ್ನ ಮುದ್ದೆಕಟ್ಟಿ, ಕೆಂಡದೊಲೆಯ ಮೇಲೆ ಬೇಯಿಸಿ ತೆಗೆದ ಬಿಸಿ ಬಿಸಿ ಬ್ರೆಡ್..!   ಪಕ್ಕಾ ರೊಮೇನಿಯನ್​ ಪದ್ಧತಿಯಲ್ಲಿ ತಯಾರಾದ ಘಮಗುಡುವ ಬ್ರೆಡ್​..! ವಾಹ್​..! ಅದನ್ನ ತಿಂದವರಿಗಷ್ಟೇ ಗೊತ್ತು ಅದರ ರುಚಿ..!ಈ ರುಚಿಯಾದ ಬ್ರೆಡ್​ಗೆ ಇನ್ನೊಂದಿಷ್ಟು ಟೇಸ್ಟ್​ ನೀಡುತ್ವೆ ಚೀಸ್​..!  ಟೇಸ್ಟಿ ಹಾಟ್​ ಬ್ರೆಡ್​​ ನ ಮೇಲೆ ಚೀಸ್​ ಸವರಿಕೊಂಡು ತಿನ್ನೋದೇ ಪ್ರವಾಸಿಗರಿಗೊಂದು ಸಂಭ್ರಮ. ರೊಮೇನಿಯಾ ಹಳ್ಳಿಗೆ ಬಂದ ಪ್ರತಿಯೊಬ್ಬ ಟೂರಿಸ್ಟ್​ನ ಮನಸಲ್ಲಿರುತ್ತೆ ರೊಮೇನಿಯನ್​​ ಹೋಮ್​ ಮೇಡ್​​ ಬ್ರೆಡ್​ ಟೇಸ್ಟ್​ ಮಾಡೋ ಆಸೆ.  ಹೀಗಾಗಿ ಹಳ್ಳಿಯೊಳಗೆ ಅಲ್ಲಲ್ಲಿ ತಲೆ ಎತ್ತಿವೆ ಹೋಮ್​ಮೇಡ್​ ಬ್ರೆಡ್​ ಅಂಗಡಿಗಳು..!

 ಜೊತೆಗೆ ರೊಮೇನಿಯನ್ ಸ್ಪೆಷಲ್​ ಮೀನುಗಳಿಂದ ತಯಾರಾದ ವಿಶೇಷ ಸೂಪು..! ವಿವಿಧ ತಿಂಡಿಗಳು..! ಹಳ್ಳಿಗೆ ಬಂದ ಅತಿಥಿಗಳ ನಾಲಿಗೆಗೆ ಇನ್ನಷ್ಟು ರುಚಿ ನೀಡೋ ತಿನಿಸುಗಳು ಇವು. ತಿಂಡಿಪೋತರಿಗಂತೂ ಇಲ್ಲಿ ಸಂಭ್ರಮವೋ ಸಂಭ್ರಮ.

ರೊಮೇನಿಯಾದ ಬುಕೋವಿನಾ ಎಂಬ ಪ್ರದೇಶದಲ್ಲಿಯ ಆರ್ಬೊರೆ ಎಂಬ ಹಳ್ಳಿಯಲ್ಲಿ ಚಿತ್ತಾರದ ಗೋಡೆಗಳ ಎಂಟು ಚರ್ಚ್​ಗಳಿವೆ. ಕ್ರಿಸ್ತನ ಕಥೆಗಳನ್ನ ಹೇಳುವ ಆ ವರ್ಣ ಚಿತ್ರಗಳು  ಶತ ಶತಮಾನಗಳಷ್ಟು ಹಳೆಯವಂತೆ..! 15 ಮತ್ತು 16ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ  ಚರ್ಚ್​ಗಳು ಇಂದಿಗೂ ಬಣ್ಣದ ಚಿತ್ತಾರದಿಂದ ಕಂಗೊಳಿಸ್ತಿವೆ. 600 ವರ್ಷಗಳಿಂದ ಬಣ್ಣ ಸ್ವಲ್ಪವೂ ಮಾಸದೆ ಉಳಿದಿರುವ ಈ ಚಿತ್ತಾರಗಳೇ ಅಚ್ಚರಿಯ ವಿಷಯ..! ಗಾರೆಯ ಮೂಲಕ ಅತಿ ತಿಳಿಯಾದ ಚಿತ್ತಾರ ಬರೆದು ಅದರ ಬಣ್ಣಕ್ಕಾಗಿ ವಿವಿಧ ಗಿಡಮೂಲಿಕೆಗಳನ್ನ ಲಿಂಬೂರಸದೊಂದಿಗೆ ಮಿಶ್ರಣ ಮಾಡಿ ಬಳಸಿದ್ದರಂತೆ..! ಗಿಡಮೂಲಿಕೆಗಳಿಂದ ತಯಾರು ಮಾಡಿರೋ ಆ ಬಣ್ಣ ಶಾಶ್ವತವಾಗಿ ಉಳಿದಿದೆ ಅಂದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಚಿತ್ತಾರದ ಈ ಚರ್ಚ್ ​ಗಳೆಲ್ಲವೂ ಯುನೆಸ್ಕೋ ವಿಶ್ವಪರಂಪರೆಯ ಪಟ್ಟಿಯಲ್ಲಿವೆ.  1993ರಲ್ಲಿ ರೊಮೆನಿಯಾದ ಈ ಅದ್ಭುತ ಚರ್ಚ್​ಗಳಿಗೆ ದೊರೆತಿದೆ ಯುನೆಸ್ಕೋ ಮಾನ್ಯತೆ.

ನೈಸರ್ಗಿಕವಾಗಿ, ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಅದ್ಭುತವಾಗಿರುವ ಪುಟಾಣಿ ದೇಶ ರೊಮ್ಯಾನಿಯಾ.  ಅದಕ್ಕೇ ಇರಬಹುದು.. ಇಲ್ಲಿಗೆ ಬಂದ ಪ್ರವಾಸಿಗರೆಲ್ಲ ಅತ್ಯಂತ ಸಂತೋಷದಿಂದ ಸುತ್ತಾಡಿ.. ಅದೇ ಸಂತಸವನ್ನ ಹೊತ್ತು ವಾಪಾಸ್ ಆಗ್ತಾರೆ..!  ಬ್ಯೂಟಿಫುಲ್​ ನೇಚರ್​, ವಂಡರ್​ಫುಲ್​ ಸ್ಮಾರಕಗಳು, ಅಮೇಜಿಂಗ್​ ಕಲೆ ಸಂಸ್ಕೃತಿಗಳಿಂದ್ಲೇ ​ಪ್ರವಾಸಿಗರ ಮನಸ್ಸಿಗೆ ನಾಟುವಂತಿದೆ ರೊಮೇನಿಯಾ. ಪ್ರಕೃತಿಯ ಮಡಿಲಿನಲ್ಲಿರೋ ಈ ಅಂದದ ದೇಶ ಭೂಲೋಕದ ಸ್ವರ್ಗ  ಅಂದ್ರೆ ಅದು ಅತಿಶಯೋಕ್ತಿಯಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...