ದಿಗ್ಗಜ ಕಾರು ಕಂಪನಿ ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಕಳೆದ ವರ್ಷ ದಾಖಲೆ ಬರೆದಿದೆ. ಕಳೆದ ವರ್ಷ ಎಷ್ಟು ಕಾರುಗಳು ಮಾರಾಟವಾಗಿದೆ ಎಂಬ ವರದಿಯನ್ನು ಕಂಪನಿ ಹೇಳಿದೆ. ಕಂಪನಿ ವರದಿ ಪ್ರಕಾರ, ಕೊರೊನಾ ಸಂದರ್ಭದಲ್ಲಿ, ಸೆಮಿಕಂಡಕ್ಟರ್‌ಗಳ ತೀವ್ರ ಕೊರತೆಯ ಮಧ್ಯೆಯೇ ಕಂಪನಿಯ ಐಷಾರಾಮಿ ಕಾರುಗಳ ಮಾರಾಟ ದಾಖಲೆ ಮಟ್ಟದಲ್ಲಿ ಏರಿದೆ.
ಅಮೆರಿಕ, ಏಷ್ಯಾ-ಪೆಸಿಫಿಕ್ ಪ್ರದೇಶ ಮತ್ತು ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ವಾಹನ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯ ಐಷಾರಾಮಿ ವಾಹನಗಳ ಮಾರಾಟವು ಸುಮಾರು ಶೇಕಡಾ 50ರಷ್ಟು ಹೆಚ್ಚಾಗಿದೆಯಂತೆ.
2021 ರೋಲ್ಸ್ ರಾಯ್ಸ್‌ಗೆ ಅಭೂತಪೂರ್ವ ವರ್ಷವೆಂದು ಸಾಬೀತಾಗಿದೆ ಎಂದು ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್‌ನ ಸಿಇಒ ಮುಲ್ಲರ್ ಒಟ್ವೋಸ್ ಹೇಳಿದ್ದಾರೆ. 117 ವರ್ಷಗಳ ಇತಿಹಾಸದಲ್ಲಿ ಗ್ಲೋಬಲ್ ಮಾರುಕಟ್ಟೆಯ ಹೆಚ್ಚಿನ ಬೇಡಿಕೆ ಕಂಡು ಬಂದಿದ್ದು, ಬೇಡಿಕೆಗೆ ಅನುಗುಣವಾಗಿ ಕಾರುಗಳನ್ನು ಸರಿಯಾದ ಸಮಯಕ್ಕೆ ಕಂಪನಿ ನೀಡಿದೆ ಎಂದವರು ಹೇಳಿದ್ದಾರೆ. ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೂ ಲಗ್ಗೆ ಇಡುತ್ತಿದೆ. ರೋಲ್ಸ್ ರಾಯ್ಸ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಸ್ಪೆಕ್ಟರ್, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 20 ನೇ ಶತಮಾನದ ಆರಂಭದಲ್ಲಿ ಆರಂಭವಾದ ಬ್ರಿಟಿಷ್ ಬ್ರ್ಯಾಂಡನ್ನು ಜರ್ಮನ್ ಆಟೋ ದೈತ್ಯ ಬಿಎಂಡಬ್ಲ್ಯೂ 1998 ರಲ್ಲಿ ಖರೀದಿಸಿತ್ತು.