ಹರಿಯಾಣದ ರೋಹ್ಟಕ್ನಲ್ಲಿ ಆಗಸ್ಟ್ 27ರಂದು ಆರೋಪಿಯು ತನ್ನದೇ ಮನೆಯ ನಾಲ್ವರನ್ನು ಬರ್ಬರವಾಗಿ ಕೊಲೆಗೈದ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣ ಸಂಬಂಧ ಮಾತನಾಡಿದ ರೋಹ್ಟಕ್ ಡಿಸಿಪಿ ಗೋರಕ್ಪಾಲ್ ರಾಣಾ ಆರೋಪಿ ಅಭಿಷೇಕ್ ನಾಲ್ವರನ್ನು ಕೊಲೆ ಮಾಡಲು ಇದ್ದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾನೆ ಎಂದು ಹೇಳಿದ್ದಾರೆ.
ಈತ ತನ್ನ ಪೋಷಕರು, ಸಹೋದರಿ ಹಾಗೂ ಅಜ್ಜಿಯನ್ನು ಕೊಲೆ ಮಾಡಿದ್ದ. ಸಲಿಂಗಕಾಮಿಯಾಗಿದ್ದ ಆರೋಪಿ ಅಭಿಷೇಕ್ ಲಿಂಗ ಪರಿವರ್ತನೆಗೆ ಮುಂದಾಗಿದ್ದ. ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಕುಟುಂಬಸ್ಥರನ್ನು ಕೊಲೆ ಮಾಡಲು ಅಭಿಷೇಕ್ ಬಹಳ ದಿನಗಳಿಂದ ಪ್ಲಾನ್ ಮಾಡಿದ್ದ. ಪುತ್ರನ ಸಲಿಂಗಕಾಮಿ ಸಂಬಂಧಕ್ಕೆ ತಂದೆ ವಿರೋಧವೊಡ್ಡಿದ್ದೇ ಈ ಕೊಲೆಗೆ ಪ್ರಮುಖ ಕಾರಣವಾಗಿತ್ತು. ಹೀಗಾಗಿ ತಂದೆಯ ಪಿಸ್ತೂಲ್ನ್ನು ವಾರದ ಹಿಂದೆಯೇ ಕದ್ದಿಟ್ಟಿದ್ದ. ಆಗಸ್ಟ್ 27ರಂದು ಮೊದಲು ಸಹೋದರಿಯನ್ನು ಕೊಲೆ ಮಾಡಿದ ಅಭಿಷೇಕ್ ಬಳಿಕ ಅಜ್ಜಿಯನ್ನು ಕೊಲೆಗೈದಿದ್ದ. ಬಳಿಕ ತಾಯಿಯನ್ನು ಹಾಗೂ ಕೊನೆಯದಾಗಿ ತಂದೆಯನ್ನು ಹತ್ಯೆಗೈದಿದ್ದ. ಮನೆಯ ಯಾವುದೇ ಸದ್ದು ಹೊರಗೆ ಕೇಳಬಾರದು ಅಂತಲೇ ಸ್ಪೀಕರ್ನಲ್ಲಿ ಜೋರಾಗಿ ಹಾಡನ್ನು ಹಾಕಿದ್ದ.
ವಿಚಾರಣೆ ವೇಳೆ ನನ್ನ ತಂದೆಗೆ ಬೆದರಿಕೆ ಕರೆ ಬರುತ್ತಿತ್ತು ಎಂದು ಹೇಳುವ ಮೂಲಕ ತಾನು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಅಲ್ಲದೇ ಶಂಕಿತರ ಹೆಸರನ್ನೂ ತಾನೇ ಹೇಳಿದ್ದ. ಪೊಲೀಸರ ಕಣ್ತಪ್ಪಿಸಲು ಇಲ್ಲ ಸಲ್ಲದ ಕತೆ ಹೇಳಿದ್ದ ಅಭಿಷೇಕ್ ಪೊಲೀಸರ ನಿರಂತರ ತನಿಖೆ ಬಳಿಕ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಅಭಿಷೇಕ್ ಬಾಯ್ಫ್ರೆಂಡ್ ಕಾರ್ತಿಕ್ ಲತ್ವಾಲ್ನನ್ನೂ ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಇಲ್ಲಿಯವರೆಗೆ ಈ ಕೊಲೆಯಲ್ಲಿ ಕಾರ್ತಿಕ್ ಪಾತ್ರ ಕಂಡುಬಂದಿಲ್ಲ.