
ಸೋಮವಾರ ನಡೆದ ಐಪಿಎಲ್ ಟಿ 20 ಕ್ರಿಕೆಟ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಒಂದಂಕಿ ರನ್ ಗೆ ಔಟಾದ ಬ್ಯಾಟರ್ ರೋಹಿತ್ ಶರ್ಮಾ ಬೇಸರದಿಂದ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಅವರ ಅಭಿಮಾನಿಗಳ ಮನ ಕರಗಿಸಿದೆ.
ರೋಹಿತ್ ಶರ್ಮಾ ಅತ್ಯುತ್ತಮ ವೈಟ್-ಬಾಲ್ ಬ್ಯಾಟರ್ ಆಗಿದ್ದಾರೆ. ಆದ್ದರಿಂದ ಅವರು ಬ್ಯಾಟಿಂಗ್‌ಗೆ ಮೈದಾನಕ್ಕಿಳಿದಾಗ ನಿರೀಕ್ಷೆಗಳು ಯಾವಾಗಲೂ ಹೆಚ್ಚಿರುತ್ತವೆ. ಆದರೆ ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡಲು ಫೀಲ್ಡಿಗಿಳಿದಾಗ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು.
ಗೆಲ್ಲಲು 174 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಐದು ಎಸೆತಗಳಲ್ಲಿ ನಾಲ್ಕು ರನ್ ಗಳಿಸಿ ಔಟಾದರು. ಇದು ಅವರ ಅಭಿಮಾನಿಗಳಿಗೆ ನಿರಾಸೆ ತಂದರೆ ಖುದ್ದು ರೋಹಿತ್ ಶರ್ಮಾರಿಗೂ ಆಘಾತ ನೀಡಿತು. ಇದರಿಂದ ರೋಹಿತ್ ಇತ್ತೀಚಿಗೆ ಬ್ಯಾಟಿಂಗ್ ನ ಉತ್ತಮ ಫಾರ್ಮ್ ನಲ್ಲಿಲ್ಲ ಭಾರತೀಯ ಕ್ರಿಕೆಟ್ ದೃಷ್ಟಿಕೋನದಿಂದ ಅದು ಒಳ್ಳೆಯದಲ್ಲ ಎಂಬುದು ಗಮನಾರ್ಹ.
ಏಕೆಂದರೆ ಅವರು ಸರಿಸುಮಾರು ಇನ್ನೊಂದು ತಿಂಗಳಲ್ಲಿ T20 ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆ. ತಮ್ಮ ಕೊನೆಯ ಐದು ಐಪಿಎಲ್ ಪಂದ್ಯಗಳಲ್ಲಿ ರೋಹಿತ್ ನಾಲ್ಕು ಏಕ ಅಂಕಿಯ ಸ್ಕೋರ್‌ಗಳನ್ನು ಒಳಗೊಂಡಂತೆ ಕೇವಲ 34 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಹೀಗಾಗಿ ತಮ್ಮ ಈ ಪ್ರದರ್ಶನಕ್ಕೆ ಬೇಸತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ರೋಹಿತ್ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಜೇಯ 102 ರನ್ ಗಳಿಂದ ಮುಂಬೈ ಇಂಡಿಯನ್ಸ್ ಏಳು ವಿಕೆಟ್‌ಗಳ ಜಯ ಸಾಧಿಸಲು ಸಾಧ್ಯವಾಯಿತು.