ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಮಂಡ್ಯ ರಾಜಕಾರಣಕ್ಕೆ ಬರಲಿ ಎಂದೆಲ್ಲಾ ಹೇಳಿ ದಿಕ್ಕಾರ ಕೂಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಾನು ಯಾರ ಮನಸ್ಸನ್ನು ನೋಯಿಸುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ಕುಮಾರಸ್ವಾಮಿ ಅವರಿಗೆ ನಾನು ಬೈದಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ನಿವಾಸದ ಬಳಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯ ಜಿಲ್ಲೆಯ ಜನಪ್ರತಿನಿಧಿ ನಾನಲ್ಲ. ನಾನು ಮಂಡ್ಯ ರಾಜಕೀಯಕ್ಕೆ, ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ. ರಾಜಕಾರಣ ಮಾಡಲು ನಾನು ಬಂದಿಲ್ಲ. ನನಗೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದವರು ರಾಜಕೀಯಕ್ಕೆ ಆಹ್ವಾನಿಸಿದ್ದರು. ನಾನು ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದೇನೆ. ನನಗೆ ರಾಜಕಾರಣ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮಂಡ್ಯ ಚುನಾವಣೆಯಲ್ಲಿ ನಾನು ಅಂಬರೀಶ್ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದು ನಿಜ. ಈಗಲ್ಲ ಹಿಂದೆ ಅಂಬರೀಶ್ ಅವರ ಎಲ್ಲಾ ಚುನಾವಣೆಗಳಲ್ಲಿಯೂ ನಾನು ಭಾಗಿಯಾಗಿದ್ದೇನೆ. ಅವರ ಜೊತೆಯಲ್ಲಿ ಇರುತ್ತಿದ್ದೆ. ನಾನು ಮಂಡ್ಯ ಜಿಲ್ಲೆಗೆ ಈಗ ಹೋಗಿಲ್ಲ. ಸುಮಲತಾ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಅಂಬರೀಶ್ ಇಲ್ಲದ ಕಾರಣ ನಾನು ಬೆಂಬಲವಾಗಿ ನಿಂತಿದ್ದೆ. ಅದು ನನ್ನ ಕರ್ತವ್ಯವೆಂದು ಭಾವಿಸಿದ್ದೆ. ಅಂಬರೀಶ್ ಅವರ ಮೇಲಿನ ಗೌರವ ಮತ್ತು ಅಭಿಮಾನದಿಂದ ನಾನು ಕಳೆದ ಚುನಾವಣೆಯಲ್ಲಿ ಭಾಗಿಯಾಗಿದ್ದೆ ಎಂದರು.
ನಾನು ಯಾವತ್ತಾದರೂ ಮಂಡ್ಯ ರಾಜಕಾರಣಕ್ಕೆ ಹೋಗಿದ್ದೇನೆ ಎಂಬುದನ್ನು ಅವರು ಸಾಬೀತುಪಡಿಸಲಿ. ಕಳೆದ 2 ವರ್ಷದಲ್ಲಿ ವಾಕ್ಸಮರಗಳು ಆಗಾಗ ನಡೆಯುತ್ತಿದ್ದವು. ಕಳೆದ 2 ವರ್ಷದಲ್ಲಿ ನಾನು ಯಾವುದೇ ಮಾತು ಆಡಿಲ್ಲ ಅಂಬರೀಶ್ ಅವರ ವಿಚಾರ ಬಂದಾಗ ಮಾತನಾಡಿದ್ದೇನೆ. ಮಂಡ್ಯ ರಾಜಕಾರಣದ ಬೆಳವಣಿಗೆಗೂ ನನಗೂ ಸಂಬಂಧವಿಲ್ಲ. ನಾನು ಯಾವುದಕ್ಕೂ ತಲೆ ತೂರಿಸಿಲ್ಲ. ಅಂಬರೀಶ್ ಅಭಿಮಾನಿಗಳು ಲಕ್ಷಾಂತರ ಜನರಿದ್ದಾರೆ. ಅವರ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದೇನೆ. ಕುಮಾರಸ್ವಾಮಿಯವರ ವಿಷಯದಲ್ಲಿ ನಾನು ಹೇಳಿಕೆ ನೀಡಲು ರಾಜಕೀಯ ಸಂಬಂಧವಿಲ್ಲ. ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ನಾನು ಉತ್ತರ ನೀಡಿಲ್ಲ. ಸುಮಲತಾ ಅವರನ್ನು ಮಾತಿನಲ್ಲಿ ಬೆದರಿಸಿ ಮಂಡ್ಯದಿಂದ ಓಡಿಸಲು ಯತ್ನಿಸಲಾಗಿದೆ. ಅವರು ನೋವಿನಲ್ಲಿದ್ದರೂ ನಾನು ರಾಜಕಾರಣಕ್ಕೆ ಎಂಟ್ರಿ ಆಗಿರಲಿಲ್ಲ ಎಂದು ಹೇಳಿದ್ದಾರೆ.
ಅಂಬರೀಶ್ ಸಮಾಧಿ, ಸ್ಮಾರಕದ ವಿಚಾರವಾಗಿ ಮಾತನಾಡಿದಾಗ ನಾನು ಅವರ ಅಭಿಮಾನಿಗಳ ಪರವಾಗಿ ಹೇಳಿಕೆ ಕೊಟ್ಟಿದ್ದೇನೆ. ಸ್ಮಾರಕ ನಿರ್ಮಾಣಕ್ಕೆ ಮುಂದಾದವರು ಹೆಚ್.ಡಿ. ಕುಮಾರಸ್ವಾಮಿಯವರು. ದೊಡ್ಡಣ್ಣ ಆಗ ಏನಾಗಿತ್ತು ಎಂಬುದನ್ನು ಹೇಳಿದ್ದಾರೆ. ಚಿತ್ರರಂಗದ ವಿಷಯ ಮಾತನಾಡಿದ್ದರಿಂದ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಕಲಾವಿದರ ಸಂಘದ ಕಾರ್ಯದರ್ಶಿಯಾಗಿ ನಾನು ಮಾತನಾಡಿದ್ದೇನೆ. ಅಂಬರೀಶ್ ಅವರ ಬಗ್ಗೆ ಮಾತನಾಡಿದಾಗ ಪ್ರತಿಕ್ರಿಯೆ ನೀಡಿದ್ದೇನೆ. ನಾನು ಒಂದೇ ಒಂದು ಅಕ್ಷರ ರಾಜಕೀಯ ಮಾತನಾಡಿದ್ದರೆ ಅವರು ಎಲ್ಲಿ ಬಂದು ಕ್ಷಮೆ ಕೇಳು ಎನ್ನುತ್ತಾರೆಯೋ ಅಲ್ಲಿಗೆ ಹೋಗಿ ಕ್ಷಮೆ ಕೇಳುತ್ತೇನೆ ಎಂದು ರಾಕ್ ಲೈನ್ ಹೇಳಿದ್ದಾರೆ.
ಇಲ್ಲಿ ಯಾರು ಪ್ರತಿಭಟನೆ ಮಾಡಿಸಿದ್ದಾರೆ ಎನ್ನುವುದನ್ನು ಪೊಲೀಸರು ಗಮನಿಸುತ್ತಾರೆ. ದೇವೇಗೌಡರ ಕುಟುಂಬದೊಂದಿಗೆ ನನಗೆ ಆತ್ಮೀಯತೆ ಇದೆ. ನಾವು ಕುಟುಂಬ ಒಡೆಯಲಾಗುತ್ತದೆಯೇ? ನಾನು ಯಾವ ವಿಷಯಕ್ಕೆ ಕ್ಷಮೆ ಕೇಳಲಿ. ಆವೇಶದಲ್ಲಿ ನಾನು ಏನಾದರೂ ತಪ್ಪು ಮಾಡಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ, ಯಾವ ವಿಷಯಕ್ಕೆ ಕೇಳಲಿ ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ನನಗೆ ಮೊದಲಿನಿಂದಲೂ ಸ್ನೇಹಿತರು. ಅವರು ನನ್ನ ಬಗ್ಗೆ ಮಾತಾಡಿಲ್ಲ. ನಾನು ಅವರ ಬಗ್ಗೆ ಮಾತಾಡಿಲ್ಲ. ಅಂಬರೀಶ್ ಮೇರು ಕಲಾವಿದರು. ಅವರಿಗೆ ಯಾರೇ ಆದರೂ ಗೌರವ ಕೊಡುತ್ತಿದ್ದರು ಎಂದು ನಾನು ಹೇಳಿದ್ದೇನೆ ಹೊರತು ರಾಜಕೀಯದ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ಸುಮಲತಾ ಜ್ಞಾನಿ. ಅವರು ಅಂಬರೀಶ್ ಜೊತೆ ಜೀವನ ನಡೆಸಿ ಸಿನಿಮಾ, ರಾಜಕಾರಣದ ಒಳ ಹೊರಗನ್ನು ತಿಳಿದಿದ್ದಾರೆ. ಅವರಿಗೆ ನಾನು ಹೇಳಿಕೊಡುವುದೇನೂ ಇಲ್ಲ ಎಂದರು.