ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಚಿತ್ರ “ಟಾಕ್ಸಿಕ್” ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಈ ಚಿತ್ರವು 2026ರ ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಸ್ವತಃ ಯಶ್ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಸ್ವಂತ ಬ್ಯಾನರ್ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಬಹುಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಯಶ್ ಅವರು ಈವರೆಗೂ ಕಾಣಿಸಿಕೊಳ್ಳದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಚಿತ್ರದ ತಾರಾಗಣದಲ್ಲಿ ಮಲಯಾಳಂ ನಟ ಶೈನ್ ಟಾಮ್ ಚಾಕೋ ಹಾಗೂ ಬಾಲಿವುಡ್ ನಟರಾದ ಕರೀನಾ ಕಪೂರ್ ಖಾನ್ ಹಾಗು ನವಾಜುದ್ದೀನ್ ಸಿದ್ದಿಕಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೆರೆಮಿ ಸ್ಟಾಕ್ ಸಂಗೀತ ನಿರ್ದೇಶನ, ರಾಜೀವ್ ರವಿ ಛಾಯಾಗ್ರಹಣ ಹಾಗೂ ಹಾಲಿವುಡ್ ಸ್ಟುಡಿಯೊಗಳಲ್ಲಿ ಬಳಸಲಾಗುವ ವರ್ಚುವಲ್ ಪ್ರೊಡಕ್ಷನ್ ಟೂಲ್ ಸ್ಟಂಟ್‌ವಿಸ್‌ನ ಸೇರ್ಪಡೆಯೊಂದಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಚಿತ್ರದಲ್ಲಿ ಬಳಸಲಾಗುತ್ತಿದೆ. ಕೈಲ್ ಪಾಲ್ ಎಂಬ ಹಾಲಿವುಡ್ ನಟ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿರುವ “ಟಾಕ್ಸಿಕ್” ಚಿತ್ರವು ಅದ್ಧೂರಿ ಚಿತ್ರವಾಗಿದ್ದು, ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
19-03-2026 🙏 pic.twitter.com/9wk8ujqxgs
— Yash (@TheNameIsYash) March 22, 2025