ನವದೆಹಲಿ: ದೆಹಲಿ ಮೂಲದ ವ್ಯಕ್ತಿಯೊಬ್ಬರು ಮೂರು ತಿಂಗಳಿನಿಂದ ಕಿಡ್ನಿ ಟ್ಯೂಬ್ ಮತ್ತು ಮೂತ್ರದ ಚೀಲವನ್ನು ದೇಹದ ಹೊರಗೆ ನೇತುಹಾಕಿಕೊಂಡು ಬದುಕುತ್ತಿದ್ದರು. ಇವರ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ರೋಬೋಟ್ ನೆರವಿನಿಂದ ಮಾಡಲಾಗಿದೆ.
32 ವರ್ಷದ ವ್ಯಕ್ತಿಗೆ ಕಿಡ್ನಿ ಸಮಸ್ಯೆಯಿಂದಾಗಿ ದೇಹದ ಹೊರಗೆ ನೇತಾಡುವ ಮೂತ್ರ ಚೀಲವನ್ನು ಅಳವಡಿಸಲಾಗಿತ್ತು. ಇದು ಸೋಂಕು ಉಂಟುಮಾಡಿತ್ತು. ನಂತರ ರೋಬೋಟ್ ಸಹಾಯದಿಂದ ಮ್ಯಾಕ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಶೈಲೇಶ್ ಚಂದ್ರ ಸಹಾಯ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ರೋಗಿಯ ಬಾಯಿಯ ಕುಹರದಿಂದ ಚರ್ಮವನ್ನು ಕಸಿ ಮಾಡುವ ಮೂಲಕ ಮೂತ್ರನಾಳವನ್ನು ಸರಿಪಡಿಸುವ ಅಪರೂಪದ ವಿಧಾನವನ್ನು ಬಳಸಿದರು.
ಮೂರು ಗಂಟೆಗಳ ಕಾಲ ನಡೆದ ಕಠಿಣ ಶಸ್ತ್ರಚಿಕಿತ್ಸೆಯಲ್ಲಿ ರೋಬೋಟಿಕ್ ನೆರವು ಪಡೆಯಲಾಯಿತು. ರೋಬೋಟ್ನ ತ್ರಿಡಿ ದೃಷ್ಟಿಕೋನದಿಂದಾಗಿ ಮೂತ್ರನಾಳಕ್ಕೆ ಕಸಿಯನ್ನು ಯಶಸ್ವಿಯಾಗಿ ಮಾಡಲಾಯಿತು.
ಮೂರು ತಿಂಗಳ ಕಾಲ ದೇಹದ ಹೊರಗೆ ನೇತಾಡುತ್ತಿದ್ದ ಮೂತ್ರ ಚೀಲವನ್ನು ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ತೆಗೆದುಹಾಕಲಾಯಿತು. ರೋಗಿಯು ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.