ಗದಗ: ಹಾಡಹಗಲೇ ದರೋಡೆಗೆ ಇಳಿದ ತಂಡವನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕಾಡರಹಳ್ಳಿ ಗ್ರಾಮದ ಸಂಜೀವ, ರಾಜಪ್ಪ ಬಂಧಿತ ಆರೋಪಿಗಳು. ಇನ್ನೂ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.
ಗದಗದ ಸಂಭಾಪುರ ರಸ್ತೆಯಲ್ಲಿ ನಿರ್ಜನ ಪ್ರದೇಶದಲ್ಲಿ ಬೈಕ್ ನಲ್ಲಿ ತೆರಳುವವರಿಗೆ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದರು. ಇತ್ತೀಚೆಗೆ ನಜೀರ್ ಅಹ್ಮದ್ ಎಂಬಾತ ಬೈಕ್ ಮೇಲೆ ಹೋಗುವಾಗ ರಾಡ್, ಚಾಕು ತೋರಿಸಿ ಜೀವ ತೆಗೆಯುವುದಾಗಿ ಬೆದರಿಸಿ ಹಣ, ಚಿನ್ನಾಭರಣ ದೋಚಿದ್ದರು.
ನಜೀರ್ ಅಹ್ಮದ್ ದೂರು ನೀಡಿದ್ದು, ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇಂದು ಹಾಡಹಗಲೇ ದರೋಡೆಗೆ ಇಳಿದ ವೇಳೆ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಪರಾರಿಯಾದವರ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಗ್ಯಾಂಗ್ ರಾಜ್ಯದ ವಿವಿಧೆಡೆ ಸುಲಿಗೆ, ವಂಚನೆ ಕೃತ್ಯದಲ್ಲಿ ಭಾಗಿಯಾಗಿದೆ ಎನ್ನಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.