ಬೀದರ್: ವ್ಯಾಪಾರಿಯೊಬ್ಬರ ತಲೆಗೆ ಗನ್ ಇಟ್ಟು ಗಾಳಿಯಲ್ಲಿ ಗುಂಡು ಹಾರಿಸಿ 3.51 ಕೋಟಿ ರೂ. ಸುಲಿಗೆ ಮಾಡಿದ ಮೂವರು ಆರೋಪಿಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ಮೂಲದ ವ್ಯಾಪಾರಿ ಉಮಾಶಂಕರ ಭಾರದ್ವಾಜ್ ತಮ್ಮ ಕಾರ್ ನಲ್ಲಿ ಸ್ನೇಹಿತರೊಂದಿಗೆ ಹೈದರಾಬಾದ್ ನಿಂದ ಮಹಾರಾಷ್ಟ್ರದ ಫಂಡರಾಪುರಕ್ಕೆ ತೆರಳುತ್ತಿದ್ದರು. ಹಾಲು ಖರೀದಿಸಿದ ರೈತರಿಗೆ ನೀಡಬೇಕಾದ ಹಣ 3.51 ಕೋಟಿ ರೂ. ತೆಗೆದುಕೊಂಡು ಹೋಗುತ್ತಿದ್ದರು.
ಹಣಮಂತವಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿದ್ದ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಗುಂಡುರೆಡ್ಡಿ ಸೇರಿದಂತೆ ನಾಲ್ವರು ಬೈಕ್ ನಲ್ಲಿ ಬಂದು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ತಲೆ ಮೇಲೆ ಗನ್ ಇಟ್ಟು ಬೆದರಿಕೆ ಹಾಕಿ ಹಣ ಇದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಕೂಡಲೇ ಉಮಾಶಂಕರ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಘಟನೆ ನಡೆದ ಎರಡು ಮೂರು ಗಂಟೆಗಳ ಅವಧಿಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 2.65 ಕೋಟಿ ರೂ. ವಶಪಡಿಸಿಕೊಂದು, ಗನ್ ಜಪ್ತಿ ಮಾಡಲಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿ ಬಸವಕಲ್ಯಾಣ ನ್ಯಾಯಾಧೀಶರ ಎದುರು ಹಾಜರುಪಡಿಸಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.