ಬೆಂಗಳೂರು: ಭಾನುವಾರ ನೀಟ್ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಬದಲಾವಣೆ ಮಾಡಲಾಗಿದೆ.
ಭಾನುವಾರ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ 26.5 ಕಿಲೋಮೀಟರ್ ರೋಡ್ ಶೋವನ್ನು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಶನಿವಾರಕ್ಕೆ ಹಿಂದೂಡಲಾಗಿದೆ. ಶನಿವಾರ ನಡೆಯಬೇಕಿದ್ದ 8 ಕಿಲೋಮೀಟರ್ ರೋಡ್ ಶೋ ಭಾನುವಾರಕ್ಕೆ ಮುಂದೂಡಲಾಗಿದ್ದು, ಶನಿವಾರ ಮತ್ತು ಭಾನುವಾರ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಜೆಪಿ ನಗರ ಆರ್‌ಬಿಐ ಲೇಔಟ್ ಸೋಮೇಶ್ವರ ಸಭಾಭವನದ ಮೋದಿ ರೋಡ್ ಶೋ ಆರಂಭವಾಗಲಿದ್ದು, ಜೆಪಿ ನಗರ ಐದನೇ ಹಂತ, ಜಯನಗರ 4ನೇ ಬ್ಲಾಕ್, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ಸಿಗ್ನಲ್, ಮೈಸೂರು ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜ ನಗರ, ಮಾಗಡಿ ರೋಡ್ ಜಂಕ್ಷನ್, ಶಂಕರಮಠ ಸರ್ಕಲ್, ಮಲ್ಲೇಶ್ವರಂ ಸರ್ಕಲ್, ಮಲ್ಲೇಶ್ವರ 18ನೇ ರಸ್ತೆ ಜಂಕ್ಷನ್ ವರೆಗೆ ಸಾಗಲಿದೆ.
ಮೋದಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರೋಡ್ ಶೋ ಸಾಗುವ ಸಂಪರ್ಕ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹೋಟೆಲ್ ಸೇರಿದಂತೆ ರೋಡ್ ಶೋ ಸಾಗುವ ದಾರಿಯಲ್ಲಿ ಅಂಗಡಿ ಮುಂಗಟ್ಟುಗಳ ವಹಿವಾಟು ಬಂದ್ ಮಾಡಲಾಗಿದೆ. ಅಕ್ಕಪಕ್ಕದ ಕಟ್ಟಡಗಳು, ಮನೆಗಳ ಮಹಡಿಗಳ ಮೇಲೆ ನಿಲ್ಲಲು ಅವಕಾಶವಿಲ್ಲ. ಕಟ್ಟಡಗಳ ಬಳಿಯ ಅಪರಿಚಿತರು ಒಳ ಪ್ರವೇಶಿಸಿದಂತೆ ನಿರ್ಬಂಧಿಸಬೇಕು. ನಿಗದಿತ ಸ್ಥಳದಲ್ಲಿ ನಿಂತು ರೋಡ್ ಶೋ ವೀಕ್ಷಿಸಬೇಕು.