
ಮಂಡ್ಯ: ಮಹಿಳೆಯ ಕೈಯಿಂದ ಆಯತಪ್ಪಿ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.
ರಸ್ತೆ ಉಬ್ಬಿನಲ್ಲಿ ತಾಯಿ ಕೈಯಲ್ಲಿದ್ದ ಮಗು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದೆ. ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿಯ ಮಗು ಮೃತಪಟ್ಟಿದೆ ಎನ್ನಲಾಗಿದೆ. ಮದುವೆಗೆ ಹೋಗಿದ್ದ ದಂಪತಿ ಬೈಕ್ ನಲ್ಲಿ ವಾಪಸಾಗುವ ವೇಳೆ ರೋಡ್ ಹಂಪ್ಸ್ ನಲ್ಲಿ ನಿಯಂತ್ರಣ ತಪ್ಪಿ ರಂಜಿತಾ ಕೈಯಿಂದ ಮಗು ಕೆಳಗೆ ಬಿದ್ದು ಗಾಯಗೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ ಎನ್ನಲಾಗಿದೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಗು ಸಾವಿನಿಂದಾಗಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.