ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಮೃತರಾಗುತ್ತಿದ್ದಾರೆ.
2021ರಲ್ಲಿ ಅಪಘಾತಗಳು 1.55 ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿವೆ, ಇದು ಆ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಎಂಬುದು ಆಘಾತಕಾರಿ ಸಂಗತಿ.
ಪ್ರತಿ ದಿನ ಸರಾಸರಿ 426 ಮಂದಿ ಮೃತರಾಗುತ್ತಿದ್ದು, ಅಥವಾ 18 ಮಂದಿ ಪ್ರತಿ ಗಂಟೆಗೆ ರಸ್ತೆ ಅಪಘಾತದಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ದೇಶಾದ್ಯಂತ 4.03 ಲಕ್ಷ ರಸ್ತೆ ಅಪಘಾತಗಳಲ್ಲಿ 3.71 ಲಕ್ಷ ಜನರು ಗಾಯಗೊಂಡಿದ್ದಾರೆ. ಇದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಮಾಹಿತಿಯಾಗಿದ್ದು, ಅಂಕಿ ಅಂಶಗಳು ಗಾಬರಿ ಹುಟ್ಟಿಸುವಂತಿದೆ.
ಅಪಘಾತಗಳಿಂದ ಸಾವನ್ನಪ್ಪಿದವರ ಸಂಖ್ಯೆ ಕಳೆದ ವರ್ಷ ಅತಿ ಹೆಚ್ಚು ಎನಿಸಿದ್ದರೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಸ್ತೆ ಅಪಘಾತಗಳು ಮತ್ತು ಗಾಯಗೊಂಡ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್.ಸಿ.ಆರ್.ಬಿ. ವರದಿ ಬಹಿರಂಗಪಡಿಸಿದೆ.
2020 ರಲ್ಲಿ ಕೋವಿಡ್ 19 ಲಾಕ್ಡೌನ್ ಇದ್ದಾಗಲೂ ಸಹ ದೇಶದಲ್ಲಿ 3.54 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿವೆ, ಇದರಲ್ಲಿ 1.33 ಲಕ್ಷ ಜನರು ಸಾವನ್ನಪ್ಪಿದ್ದಾರೆ ಮತ್ತು 3.35 ಲಕ್ಷ ಜನರು ಗಾಯಗೊಂಡಿದ್ದಾರೆ.
2019 ರಲ್ಲಿ 4.37 ಲಕ್ಷ ರಸ್ತೆ ಅಪಘಾತಗಳಲ್ಲಿ 1.54 ಲಕ್ಷ ಜನರು ಸಾವನ್ನಪ್ಪಿದ್ದಾರೆ ಮತ್ತು 4.39 ಲಕ್ಷ ಜನರು ಗಾಯಗೊಂಡಿದ್ದಾರೆ.
ಸಾಮಾನ್ಯವಾಗಿ ರಸ್ತೆ ಅಪಘಾತಗಳು ಸಾವುಗಳಿಗಿಂತ ಹೆಚ್ಚು ಗಾಯಗಳನ್ನು ಉಂಟುಮಾಡುತ್ತವೆ, ಆದರೆ ಮಿಜೋರಾಂ, ಪಂಜಾಬ್, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ, ಗಾಯಗೊಂಡ ವ್ಯಕ್ತಿಗಳಿಗೆ ಹೋಲಿಸಿದರೆ ಹೆಚ್ಚು ಸಾವುಗಳಿಗೆ ಕಾರಣವಾಗಿವೆ.